ADVERTISEMENT

ಕನಕಗಿರಿಯಲ್ಲಿ ಫ್ಲೆಕ್ಸ್ ರಾಜಕಾರಣ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:55 IST
Last Updated 24 ಮಾರ್ಚ್ 2011, 8:55 IST

ಕನಕಗಿರಿ: ಇದೇ 26ರಂದು ಇಲ್ಲಿನ ಐತಿಹಾಸಿಕ ಪ್ರಸಿದ್ಧಿಯ ಕನಕಾಚಲಪತಿ ದೇವರ ಜಾತ್ರಾ ಮಹೋತ್ಸವ ನಡೆಯಲಿದ್ದು ಬಿಜೆಪಿ, ಜೆಡಿಎಸ್ ಫ್ಲೆಕ್ಸ್ ರಾಜಕಾರಣದಲ್ಲಿ ತೊಡಗಿರುವುದು ಕಂಡು ಬಂದಿದೆ.ಜಾತ್ರಾ ಮಹೋತ್ಸವದ ನಿಮಿತ್ತ ಶುಭಾಶಯಗಳನ್ನು ಕೋರುವ ಫ್ಲೆಕ್ಸ್‌ಗಳು ಪಟ್ಟಣದ ಎಲ್ಲೆಡೆ ಕಂಡು ಬಂದಿವೆ.ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅದೃಷ್ಟ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಜ ತಂಗಡಗಿ ಅಕ್ಟೋಬರ್‌ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಸಿಡಿದೆದ್ದು ಶಾಸಕತ್ವದಿಂದ ಅನರ್ಹಗೊಂಡಿದ್ದಾರೆ.

ಈಚೆಗೆ ಹೈಕೋರ್ಟ್ ಕೂಡ ವಿಧಾನಸಭಾ ಸ್ಪೀಕರ್ ಅವರ ತೀರ್ಪು ಎತ್ತಿ ಹಿಡಿದಿದ್ದು ಶಾಸಕತ್ವದ ವಿಚಾರ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ.ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿದರೆ ಮತ್ತೆ ಚುನಾವಣೆ ಅನಿವಾರ್ಯ. ಈ ನಿಟ್ಟಿನಲ್ಲಿ ಉಪ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಪೈಪೋಟಿ ಎಂಬಂತೆ ಬಿಜೆಪಿ ಮುಖಂಡರುಗಳ ಭಾವಚಿತ್ರ ಇರುವ ಫ್ಲೆಕ್ಸ್‌ಗಳನ್ನು ಹಾಕಿಸಿ ಒಂದು ಹಂತದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ ಎಂದು ಜನತೆ ಮಾತನಾಡುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ತಾಲ್ಲೂಕಿನ ಲಂಕೇಶ ಗುಳದಾಳ, ಆಗಸ್ಟ್ ತಿಂಗಳಿಂದಲೂ ಮೌಖಿಕ ಪ್ರಚಾರ ಕೈಗೊಂಡಿರುವ ಮಾಜಿ ಕಾಂಗ್ರೆಸಿಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸಿಂಧನೂರಿನ ದಡೇಸೂಗರು ಬಸವರಾಜ, ತಂಗಡಗಿ ಅನರ್ಹಗೊಂಡಾಗ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬೆಂಗಳೂರು ಮೂಲದ, ಕನಕಗಿರಿ ಮತದಾರ ಕೆ. ಲಕ್ಷ್ಮೀ ನಾರಾಯಣ, ಬಿಜೆಪಿಯ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾರೇಶ ಮುಷ್ಟೂರು ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಜಾತ್ರಾ ಶುಭಾಶಯಗಳನ್ನು ಕೋರುವ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ದಡೇಸೂಗರು ಹಾಕಿದ ಫ್ಲೆಕ್ಸ್‌ಗಳಿಂದ ಪ್ರೇರಣೆಗೊಂಡ ಲಂಕೇಶ ಗುಳದಾಳ, ಮಾರೇಶ ಮುಷ್ಟೂರು ತಾವೂ ಏನೂ ಕಡಿಮೆ ಇಲ್ಲ ಎನ್ನುವಂತೆ ನಾಯಕರುಗಳ ಭಾವಚಿತ್ರ ಇರುವ ಫ್ಲೆಕ್ಸ್ ಹಾಕಿಸಿ ಆಶೀರ್ವಾದ ಕೋರಿದ್ದಾರೆ.ಮಹಿಳಾ ಮೀಸಲಾತಿ ಮಸೂದೆ ಕಾನೂನಾಗಿ ಜಾರಿಗೆ ಬಂದು ಈ ಕ್ಷೇತ್ರ ಮಹಿಳಾ ಮೀಸಲಾತಿಗೆ ಬಂದರೆ ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸಬೇಕೆಂಬ ಆಸೆಯೊಂದಿಗೆ ಲಂಕೇಶ ಗುಳದಾಳ ತಮ್ಮ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾ ಅವರನ್ನು ಫ್ಲೆಕ್ಸ್ ಮೂಲಕ ಕ್ಷೇತ್ರದಲ್ಲಿ ಪರಿಚಯಿಸಿದ್ದಾರೆ.   ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಫ್ಲೆಕ್ಸ್‌ಗಳು ಕೂಡ ಪಟ್ಟಣದಲ್ಲಿ ಮಿಂಚುತ್ತಿವೆ.  ಕಾಂಗ್ರೆಸ್ ಇಲ್ಲಿ ತನಕ ಈ ಫ್ಲೆಕ್ಸ್ ರಾಜಕಾರಣದತ್ತ ಹೋಗದಿರುವುದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.