
ಯಲಬುರ್ಗಾ: ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಪೆ ಬಿಸಿಯೂಟ ಹಾಗೂ ಮುಖ್ಯೋಪಾಧ್ಯಾಯರ ಅಸಭ್ಯ ವರ್ತನೆಗೆ ಬೇಸತ್ತು ಶುಕ್ರವಾರ ಮಕ್ಕಳು ಪ್ರತಿಭಟನೆ ನಡೆಸಿದರು.
ಸುಮಾರು ವರ್ಷಗಳಿಂದ ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ದೇವಪ್ಪ ಅವರು ಮಕ್ಕಳೊಂದಿಗೆ ಹಾಗೂ ಪಾಲಕರೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಬಿಸಿಯೂಟಕ್ಕೆ ಬೇಕಾದ ಅಗತ್ಯ ಸಾಮಗ್ರಿ ಖರೀದಿಗೆ ಹಣ ಖರ್ಚು ಹಾಕಿದರೂ ಆಹಾರ ತಯಾರಿಕೆಯಲ್ಲಿ ಬಳಸುವುದಿಲ್ಲ. ಕಳಪೆ ಆಹಾರ ತಯಾರಿಸಿ ಮಕ್ಕಳಿಗೆ ಹಾಕುತ್ತಿದ್ದಾರೆ. ಈ ಧೋರಣೆಯನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಫೇಲು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮದ ಶರಣಪ್ಪ ಈಳಿಗೇರ, ಮುದಕನಗೌಡ ಪಾಟೀಲ ಹಾಗೂ ಬಸವರಾಜ ಹವಳದ ಆರೋಪಿಸಿದರು.
ಒಂದರಿಂದ 8ನೇ ತರಗತಿವರೆಗೆ 350ಕ್ಕೂ ಅಧಿಕ ಮಕ್ಕಳಿದ್ದಾರೆ. 4 ಜನ ಅಡುಗೆಯವರಿದ್ದಾರೆ. ಆದರೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯ ಮಕ್ಕಳ ಹಿತಿ ಕಾಪಾಡದೆ ಬರೀ ಅಡುಗೆ ಮನೆಯಲ್ಲಿಯೇ ಇದ್ದು ಅಡುಗೆಯವರೊಂದಿಗೆ ಹೊತ್ತು ಕಳೆಯುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದರೂ ಸುಧಾರಿಸಿಕೊಂಡಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಈ ಅಕ್ರಮದಲ್ಲಿ ಅವರು ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಎಂದು ಪ್ರವೀಣ ಮುಸಿಗೇರಿ ಹಾಗೂ ಶಿವರಾಜ ಆಕ್ರೋಶ ಪಡಿಸಿದ್ದಾರೆ.
ಪಾಠ, ಆಟ ಹಾಗೂ ಇನ್ನಿತರ ಚಟುವಟಿಕೆ ಸಮಪರ್ಕಕವಾಗಿ ನಡೆಯುತ್ತಿಲ್ಲ. ಅವರು ಏನು ಹೇಳುತ್ತಾರೋ ಅದನ್ನೇ ಕೇಳಬೇಕು. ಮುಖ್ಯಶಿಕ್ಷಕರ ವರ್ತನೆಯಿಂದ ಶಾಲೆಗೆ ಹೋಗುವುದಕ್ಕೆ ಬೇಸರವಾಗಿದೆ. ಆಹಾರ ತೀರಾ ಕಳಪೆಯಾಗಿದ್ದು, ನೆನಸಿಕೊಂಡರೆ ವಾಂತಿಯಾದಂತಾಗುತ್ತದೆ ಎಂದು ವಿದ್ಯಾರ್ಥಿಗಳಾದ ಸುರೇಶ ರಾಠೋಡ, ಪ್ರಭು ತಳವಾರ, ಬಸವರಾಜ ಕುದ್ರಿಕೋಟಗಿ ಆಪಾದಿಸಿದರು.
ಶೈಕ್ಷಣಿಕವಾಗಿ ಯಾವುದೇ ಸುಧಾರಣೆಗೆ ಶ್ರಮಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಮುಖ್ಯೋಪಾಧ್ಯಾಯರು, ಸರಿಯಾಗಿ ಪಾಠ ಮಾಡದ ಶಿಕ್ಷಕರು, ಸರಿಯಾಗಿ ಬಿಸಿಯೂಟ ತಯಾರಿಸದೆ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಳಿ, ಕುರಿ ತಿಂದು ದಕ್ಕಿಸಿ ಕೊಳ್ಳುವರಿಗೆ ಸಣ್ಣ ನುಸಿ ತಿನ್ನೋಕೆ ಆಗೋದಿಲ್ವಾ ಎನ್ನುವ ಮುಖ್ಯಶಿಕ್ಷಕ ರನ್ನು ಅಮಾನತು ಮಾಡಬೇಕು.
– ಶಿವರಾಜ ಚಿಕ್ಕೊಪ್ಪ,
ಜನಪರ ಸಂಘಟನೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.