ADVERTISEMENT

ಕಾಂಗ್ರೆಸ್ ನಮ್ಮ ನೇರ ಎದುರಾಳಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:00 IST
Last Updated 13 ಸೆಪ್ಟೆಂಬರ್ 2011, 9:00 IST

ಮುನಿರಾಬಾದ್: ಇದೇ 26ರಂದು ನಡೆಯಲಿರುವ ಕೊಪ್ಪಳ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ತಮಗೆ ನೇರ ಪ್ರತಿಸ್ಫರ್ಧಿ, ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಬಿಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.

ಭಾನುವಾರ ಸಮೀಪದ ಬೇವಿನಹಳ್ಳಿಯಲ್ಲಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕ್ಷೇತ್ರದ ವ್ಯಾಪ್ತಿಯ ಭಾಗ್ಯನಗರ ಮತ್ತು ಯತ್ನಟ್ಟಿ ಗ್ರಾಮಗಳ ಜನತೆ ಚುನಾವಣೆಯನ್ನು ಬಹಿಷ್ಕರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮೇಲಿಂದ ಮೇಲೆ ಹಾಕುವ ರೈಲ್ವೆ ಗೇಟಿನ ದೆಸೆಯಿಂದ ಸಂಚಾರಕ್ಕೆ ತಮಗೆ ತೊಂದರೆಯಾಗುತ್ತಿದ್ದು ಅಡಚಣೆ ತಪ್ಪಿಸಲು ಮೇಲ್ಸೇತುವೆ ನಿರ್ಮಿಸಲು ಎರಡೂ ಗ್ರಾಮಸ್ಥರ ಒತ್ತಾಯವಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದ್ದು ತಾಂತ್ರಿಕ ಕಾರಣದಿಂದ ಕಾಮಗಾರಿ ಪ್ರಾರಂಭ ವಿಳಂಬವಾಗುತ್ತಿದೆ.

ಮುಂದಿನ ವಾರ ಕ್ಷೇತ್ರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಪಕ್ಷದ ಹಿರಿಯ ಮುಖಂಡರಿಂದ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಲಾಗುವುದು. ಬಹಿಷ್ಕಾರ ಹಿಂತೆಗೆದುಕೊಂಡು ತಮ್ಮ ಮತ ಚಲಾಯಿಸಲು ಗ್ರಾಮಸ್ಥರು ಖಂಡಿತ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಸಂಗಣ್ಣ ಕರಡಿ ಹೇಳಿದರು. ಪಕ್ಷದ ಮುಖಂಡ ಹನುಮಂತಪ್ಪ ಅಂಗಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಬಿಜೆಪಿ ಜಿಲ್ಲಾಧ್ಯಕ್ಷ ಗಿರೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುನಗೌಡ ಪಾಟೀಲ್, ಮರ್ದಾನಪ್ಪ ಬಿಸನಳ್ಳಿ ಇತರರು ಇದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.