ADVERTISEMENT

ಕಾರಟಗಿ: ವೈಭವದ ಶ್ರೀದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:35 IST
Last Updated 8 ಅಕ್ಟೋಬರ್ 2011, 10:35 IST

ಕಾರಟಗಿ: ಶರನ್ನವರಾತ್ರಿ ಉತ್ಸವದ ಕೊನೆಯ ಹಂತವಾಗಿ ಶ್ರೀದೇವಿಯ ರಥೋತ್ಸವವು ಶುಕ್ರವಾರ ಶ್ರದ್ಧಾ, ಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಮಹಿಳೆಯರೆ ಪಲ್ಲಕ್ಕಿ ಹೋರುವುದು, ರಥ ಎಳೆಯುವುದು ವಿಶೇಷವಾಗಿತ್ತು. ಮಹಿಳೆಯರು ಉತ್ಸಾಹದಿಂದ ರಥ ಎಳೆಯುವುದು ಗಮನ ಸೆಳೆಯಿತು.

ದೇವಾಲಯದಿಂದ ಆರಂಭಗೊಂಡ ರಥೋತ್ಸವವು ಕನಕದಾಸ ವೃತ್ತದ ಬಳಿಯ ಎದುರು ಬಸವಣ್ಣವರೆಗೆ ಸಾಗಿ ದೇವಾಲಯಕ್ಕೆ ಮರಳಿತು.

ಬೆಳಿಗ್ಗೆಯಿಂದಲೇ ಶ್ರೀದೇವಿ ದೇವಸ್ಥಾನದಲ್ಲಿ ಜನಪ್ರತಿನಿಧಿಗಳು, ನಾಗರಿಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ, ಭಕ್ತಿಭಾವ ಸಮರ್ಪಿಸಿದರು.

ಕಾರಟಗಿ ಸೇರಿದಂತೆ ವಿವಿಧ ಹಳ್ಳಿ ಹಾಗೂ ಕ್ಯಾಂಪ್‌ಗಳ ನಾಗರಿಕರು ಹಾಗೂ ಮಹಿಳೆಯರು ರಥೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ವ್ಯಾಪಕ  ಬಂದೋಬಸ್ತ್ ಏರ್ಪಡಿಸಿದ್ದರು.

ಪುರಾಣ ಮಂಗಲ: ಸಮೀಪದ ಹುಳ್ಕಿಹಾಳ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಶರನ್ನವರಾತ್ರಿ ಉತ್ಸವವು ಗುರುವಾರ ಪುರಾಣ ಮಹಾಮಂಗಲದೊಂದಿಗೆ ಮುಕ್ತಾಯವಾಯಿತು. ಬೆಳಿಗ್ಗೆ ಸಕಲ ವಾದ್ಯಮೇಳಗಳೊಂದಿಗೆ ಗಂಗಸ್ಥಳಕ್ಕೆ ಹೋಗಲಾಯಿತು. ದೇವಿಯ ಭವ್ಯ ಮೆರವಣಿಗೆ ನಡೆದು, ಬನ್ನಿಗಿಡಕ್ಕೆ ಪೂಜೆ ಸಲ್ಲಿಸಲಾಯಿತು. ಉತ್ಸವದ ಯಶಸ್ವಿಗೆ ಗ್ರಾಮಸ್ಥರು  ಸಹಕರಿಸಿದರು ಎಂದು ದೇವಸ್ಥಾನ ಸಮಿತಿಯ ಸಾಹುಕಾರ ಪಂಪಾಪತೆಪ್ಪ, ಮಲ್ಲಿಕಾರ್ಜುನ ಯತ್ನಟ್ಟಿ ಹಾಗೂ ಅಮರೇಶ್ ಅಮರಾಪೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.