ಯಲಬುರ್ಗಾ: ಕಾವ್ಯ ರಚನೆಯು ಭಾವನೆ ಹಾಗೂ ಕನಸುಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಗೊಳಿಸುವ ಒಂದು ಕಲೆಯಾಗಿದೆ. ಬಹುತೇಕ ಸಾಹಿತಿಗಳು ಕವನಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ ಎಂದು ಡಾ. ಕೆ.ಬಿ.ಬ್ಯಾಳಿ ಹೇಳಿದರು.
ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಆಯೋಜಿಸಿದ್ದ 6ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯದ ಪ್ರಮುಖ ಅಂಗವಾದ ಕಾವ್ಯ ಅತ್ಯಂತ ಪವಿತ್ರವಾದ ಸೃಷ್ಟಿ. ಓದುಗರನ್ನು ಕ್ಷಣಕಾಲ ಮೈಮರೆಯುವಂತೆ ಮಾಡುವ ಶಕ್ತಿ ಕವನಕ್ಕೀದೆ. ಇಂತಹ ಕವನಗಳು ಅಪರೂಪವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿರುವುದು ಸಮಾಧಾನದ ಸಂಗತಿ ಎಂದರು.
ತಾಲ್ಲೂಕಿನ ಗಡಿಭಾಗದಲ್ಲಿನ ಈ ಸಮ್ಮೇಳನದಲ್ಲಿ ಕೆಲ ಯುವ ಕವಿಗಳ ಕವನ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಆಶಾದಾಯಕ ಬೆಳವಣಿಗೆ. ಹಾಗೆಯೇ ಅನೇಕ ಕವಿಗಳು ಭಾಷಾ ಸುಧಾರಣೆ, ಸ್ಪಷ್ಟ ಉಚ್ಚಾರ, ಶಬ್ದ ಸಂಗ್ರಹಣೆಗೆ ಹೆಚ್ಚು ಒತ್ತು ನೀಡುವುದು ಅಗತ್ಯ ಎನಿಸುತ್ತದೆ, ನಿರಂತರ ಅಧ್ಯಯನದಿಂದ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ಯುವ ಬರಹಗಾರರಿಗೆ ಸಲಹೆ ನೀಡಿದರು.
ಡಾ. ಪಂಚಾಕ್ಷರಿ ಹಿರೇಮಠ, ಡಾ. ಜಾಜಿ ದೇವೇಂದ್ರಪ್ಪ ಹಾಗೂ ಇತರರು ಮಾತನಾಡಿದರು. ಪ್ರಚಲಿತ ವಿದ್ಯಾಮಾನ, ಸಾಮಾಜಿಕ ಕಳಕಳಿ, ಪ್ರೇಮ ನಿವೇದನೆ, ಮಳೆ, ನಿರಾಸೆ, ಬೇಸರ, ತ್ಯಾಗ, ರಾಜಕೀಯ ವಿಡಂಬನೆ, ದೇಶಭಕ್ತಿ ಹಾಗೂ ದೇವರ ಭಕ್ತಿ ಜೊತೆಗೆ ಧರ್ಮದ ಕುರಿತು ಅನೇಕ ಕವನಗಳು ಕವಿಗೋಷ್ಠಿಯಲ್ಲಿ ಅನಾವರಣಗೊಂಡವು. ಸಮ್ಮೇಳನಾಧ್ಯಕ್ಷ ಎಚ್.ಎಸ್. ಪಾಟೀಲ ನೇತೃತ್ವ ವಹಿಸಿದ್ದರು. ಅಜಿಮೀರ ನಂದಾಪೂರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.