ADVERTISEMENT

‘ಕೆರೆ ತುಂಬಿಸುವ ಯೋಜನೆ ಯಶಸ್ವಿ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 8:31 IST
Last Updated 24 ಅಕ್ಟೋಬರ್ 2017, 8:31 IST

ಕೊಪ್ಪಳ: ‘ರಾಜ್ಯ ಸರ್ಕಾರದ ಅತ್ಯಂತ ಮಹತ್ವ ಪೂರ್ಣ ಯೋಜನೆಗಳಲ್ಲೊಂದಾದ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ಹೇಳಿದರು. ತಾಲ್ಲೂಕಿನ ಹಿರೇಬಗನಾಳ ಗ್ರಾಮದ ಸುಮಾರು 150ರಿಂದ 200 ಎಕರೆ ವಿಸ್ತೀರ್ಣವುಳ್ಳ ಕೆರೆಗೆ ತುಂಗಭದ್ರ ನದಿಯ ಹಿನ್ನೀರಿನಿಂದ ತುಂಬಿದ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಹಿರೇಬಗನಾಳ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಈ ಕೆರೆಯು ಸಂಪೂರ್ಣವಾಗಿ ಭರ್ತಿಯಾಗಿದೆ. ಬರುವ ದಿನಗಳಲ್ಲಿ ಇನ್ನೊಂದು ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ನವಲಕಲ್- ಬಹದ್ದೂರ್‌ ಬಂಡಿ ಏತ ನೀರಾವರಿ ಯೋಜನೆಗೆ ಮುಂದಿನ ತಿಂಗಳು ಶಂಕು ಸ್ಥಾಪನೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

‘ಬರುವ ದಿನಗಳಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ ಒಣಬೇಸಾಯದ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಗುವುದು. ಈ ಕೆರೆಯ ಭಾಗದ ಅಂತರ್ಜಲಮಟ್ಟ ಹೆಚ್ಚಿದ್ದು, 3-4 ವರ್ಷಗಳಿಂದ ಬಂದಾಗಿದ್ದ ಕೊಳವೆಬಾವಿಗಳು ಪುನಃ ಆರಂಭವಾಗಿರುವುದರಿಂದ ರೈತ ಸಮುದಾಯದಲ್ಲಿ ಹರ್ಷ ಉಂಟಾಗಿದೆ’ ಎಂದು ಹೇಳಿದರು.‌

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗೂಳಪ್ಪ ಹಲಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಣ್ಣ ದೇವರಮನಿ, ನಗರಸಭಾ ಸದಸ್ಯ ಅಮ್ಜದ್‌ ಪಟೇಲ್, ಮುಖಂಡರಾದ ಭರಮಪ್ಪ ನಗರ, ಸೋಮಣ್ಣ ಬಾರಕೇರ, ಶಿವಾನಂದ ಹೊದ್ಲುರ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ವಕ್ತಾರ್‌ ಅಕ್ಬರ್ ಪಾಷಾ ಪಲ್ಟನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.