ADVERTISEMENT

ಕೆಲಸ ಬಹಿಷ್ಕರಿಸಿದ ಸಿಬ್ಬಂದಿ, ಶಿಕ್ಷಕರ ಪರದಾಟ

ಶಿಕ್ಷಣಾಧಿಕಾರಿ, ನೌಕರರ ಮಧ್ಯೆ ಸಮನ್ವಯದ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:35 IST
Last Updated 12 ಡಿಸೆಂಬರ್ 2013, 8:35 IST

ಕುಷ್ಟಗಿ: ವೈಯಕ್ತಿಕ ಪ್ರತಿಷ್ಠೆ ಮತ್ತು ಸಮನ್ವಯ ಕೊರತೆಯಿಂದಾಗಿ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕಚೇರಿ ಸಿಬ್ಬಂದಿ ನಡುವಿನ ಹೊಂದಾಣಿಕೆ ಹಳಿತಪ್ಪಿದ್ದು ಅಧಿಕಾರಿ ಮತ್ತು ಸಿಬ್ಬಂದಿ ನಡುವಿನ ಜಗಳ ಬೀದಿಗೆ ಬಂದ ಘಟನೆ ಈಚೆಗೆ ಇಲ್ಲಿ ನಡೆಯಿತು.

ಕಚೇರಿಗೆ ಬಂದರೂ ಕೆಲಸಕ್ಕೆ ಹಾಜರಾಗದ ಎಲ್ಲ ಸಿಬ್ಬಂದಿ ಬಿಇಒ ವಿರುದ್ಧ ಪರೋಕ್ಷ ಸಮರ ಸಾರಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಹೊರಗೆ ರಸ್ತೆ ಬದಿಯಲ್ಲಿಯೇ ಕುಳಿತು ಮೌನ ಪ್ರತಿಭಟನೆ ನಡೆಸಿದ್ದು ಸಾರ್ವ­ಜನಿಕರ ಗಮನಸೆಳೆಯಿತು. ಅಲ್ಲದೇ ಕೆಲಸ ಕಾರ್ಯಗಳಿಗೆಂದು ಕಚೇರಿಗೆ ಬಂದಿದ್ದ ಶಿಕ್ಷಕರು ಪರದಾಡುವಂತಾ­ಯಿತು. ನಂತರ ಸಂಧಾನ ನಡೆದು ಮಧ್ಯಾಹ್ನ 3 ಗಂಟೆಯಿಂದ ಕೆಲಸಕ್ಕೆ ಹಾಜರಾಗಿರುವುದಾಗಿ ಸಿಬ್ಬಂದಿ­ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ತಮ್ಮ ಕೊಠಡಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ಮ್ಯಾಗೇರಿ, ಎಲ್ಲ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ಮುಗಿಯಬೇಕು, ಶಿಕ್ಷಕರ ಎಲ್ಲ ಕಡತಗಳನ್ನು ನೇರವಾಗಿ ಸಿಬ್ಬಂದಿ ಚೇಂಬರ್‌ಗೆ ಹೊತ್ತುಕೊಂಡು ಬಾರದೇ ವ್ಯವಸ್ಥಾಪಕರ ಮೂಲಕ ಬರಬೇಕು, ಯಾವುದೇ ಶಿಕ್ಷಕರನ್ನು ತಮ್ಮ ಬಳಿ ಕರೆದುಕೊಂಡು ಬರಬಾರದು ಎಂದು ತಾಕೀತು ಮಾಡಿದರು. ಅಲ್ಲದೇ ಸರಿಯಾಗಿ ಕೆಲಸ ನಿರ್ವಹಿಸದ ಎರವಲು ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಶಿಕ್ಷಣಾಧಿಕಾರಿ ಮಾತನ್ನು ಆಕ್ಷೇಪಿಸಿದ ಕೆಲ ಸಿಬ್ಬಂದಿ, ಹಿಂದಿನ ಅಧಿಕಾರಿಗಳು ಹೀಗೆ ಇಲ್ಲದ ಒತ್ತಡ ಹೇರುತ್ತಿರಲಿಲ್ಲ, ನೀವು ಹೊಸ ಪರಿಪಾಠ ಬೆಳೆಸುವುದಕ್ಕೆ ಸಹಮತ ಇಲ್ಲ ಎಂದರು. ಆದರೆ ತಾವು ಆಡಳಿತಾತ್ಮಕ ದೃಷ್ಟಿ­ಯಿಂದ ಕರ್ತವ್ಯ ನಿಭಾಯಿಸುವುದಕ್ಕೆ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಕ್ಕೆ ಅಸಮಾಧಾನಗೊಂಡ ಸಿಬ್ಬಂದಿ ದಿಢೀರನೇ ಕಚೇರಿ ಬಿಟ್ಟು ಹೊರನಡೆದರು ಎಂದು ಸ್ಥಳದಲ್ಲಿದ್ದ ಕೆಲ ಶಿಕ್ಷಕರು ನಂತರ ಸುದ್ದಿಗಾರರಿಗೆ ವಿವರಿಸಿದರು.

ಕೆಲ ಸಿಬ್ಬಂದಿ ತಮ್ಮ ವಿರುದ್ಧ ಶಿಕ್ಷಕರನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಶಿಕ್ಷಣಾ­ಧಿಕಾರಿ ಮ್ಯಾಗೇರಿ ಚಂದ್ರಶೇಖರ ಶಿರಗುಂಪಿ ಎಂಬ ದ್ವಿತೀಯ ದರ್ಜೆ ಸಹಾಯಕನನ್ನು ಬೇರೆಡೆ ಎತ್ತಂಗಡಿ ಮಾಡಲು ಮುಂದಾಗಿರುವುದೇ ಸಿಬ್ಬಂದಿ ಬಿಇಒ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಕಾರಣ ಎಂದು ಗೊತ್ತಾಗಿದೆ. ಸರಿಯಾಗಿ ಕೆಲಸ ಮಾಡಿಸಿಕೊಳ್ಳಿ, ತಾಲ್ಲೂಕಿನಲ್ಲಿ 1100 ಶಿಕ್ಷಕರು ಇದ್ದು ಕೆಲಸದ ಒತ್ತಡ ಇದೆ, ಹಾಗಾಗಿ ನೌಕರರನ್ನು ಎತ್ತಂಗಡಿ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದೆ ಇನ್ನೂ ಕೆಲ ಸಿಬ್ಬಂದಿ ಬಿಇಒಗೆ ನೇರವಾಗಿಯೇ ಹೇಳಿದ್ದನ್ನು ಸಭೆಯಲ್ಲಿದ್ದವರು ತಿಳಿಸಿದರು.

ಬಿಇಒ ಹೇಳಿಕೆ: ಈ ಕುರಿತು ವಿವರಿಸಿದ ಶಿಕ್ಷಣಾಧಿಕಾರಿ ಸಿ.ವಿ. ಮ್ಯಾಗೇರಿ, ಇಲಾಖೆಯಲ್ಲಿ ಸುಧಾರಣೆ ತರಬೇಕು, ಶಿಕ್ಷಕರ ಸಮಸ್ಯೆಗಳಿಗೆ ಸಕಾಲ­ದಲ್ಲಿ ಉತ್ತಮ ಸೇವೆ ಒದಗಿಸಬೇಕು ಎಂಬುದು ತಮ್ಮ ಅಪೇಕ್ಷೆ. ಆದರೆ ಹೊಸ ವ್ಯವಸ್ಥೆಗೆ ಮನಸ್ಥಿತಿ ಹೊಂದಾಣಿಕೆಯಾಗಲಾದರ ಕಾರಣ ಸಿಬ್ಬಂದಿ ಅಸಮಾಧಾನಗೊಂಡಿದ್ದರು. ಸದ್ಯ ಎಲ್ಲದೂ ತಿಳಿಯಾಗಿದೆ ಎಂದು ಹೇಳಿದರು.

ವಿಷಯ ತಿಳಿಯುತ್ತಿದ್ದಂತೆ ಕಚೇರಿ ಬಳಿ ಪ್ರತ್ಯಕ್ಷರಾದ ಸಿಬ್ಬಂದಿ ಮತ್ತು ಅಧಿಕಾರಿ ಗುಂಪುಗಳನ್ನು ಪ್ರತಿನಿಧಿಸುವ ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಎರಡೂ ಗುಂಪುಗಳಿಗೂ ತಿಳಿ ಹೇಳುವ ಮೂಲಕ ಪ್ರಭಾವ ಬೀರಲು ಯತ್ನಿಸಿದ್ದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.