ADVERTISEMENT

ಗಂಗಾವತಿ ನಗರಸಭೆ: ಸಿಸಿ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:09 IST
Last Updated 13 ಸೆಪ್ಟೆಂಬರ್ 2013, 8:09 IST

ಗಂಗಾವತಿ: ಇಲ್ಲಿನ ನಗರಸಭೆಯು ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಗೆ ಮೊರೆ ಹೋಗಿದೆ. ಜಿಲ್ಲೆಯಲ್ಲಿ ಕೊಪ್ಪಳ ನಗರಸಭೆಯ ಬಳಿಕ ಸಿಸಿ ಕ್ಯಾಮೆರಾ ತಂತ್ರಜ್ಞಾನ ಅಳವಡಿಸಿಕೊಂಡ ಎರಡನೇ ಸ್ಥಳಿಯ ಸಂಸ್ಥೆ ಹಾಗೂ ತಾಲ್ಲೂಕಿನ ಮೊದಲ ಸರ್ಕಾರಿ ಸಾರ್ವಜನಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಗಂಗಾವತಿ ನಗರಸಭೆ ಪಾತ್ರವಾಗಿದೆ.

ಸಾರ್ವಜನಿಕ ಸಮಸ್ಯೆ, ಕುಂದು ಕೊರತೆಗಳ ದೂರು ಹಿಡಿದುಕೊಂಡು ನಗರಸಭೆಯ ಕಚೇರಿಗೆ ಆಗಮಿಸುವ ನಾಗರಿಕರ ಮಾಹಿತಿಯನ್ನು ಸಿಸಿ ಕ್ಯಾಮೆರಾ ಅಳವಡಿಸಿಕೊಂಡ ಬಳಿಕ ಪೌರಾಯುಕ್ತರು ತಮ್ಮ ಕೊಠಡಿ­ಯಿಂ­ದಲೇ ವೀಕ್ಷಿಸಿ ನೇರ ಭೇಟಿಗೆ ಅವಕಾಶ ನೀಡುವ ಕಾರ್ಯ ನಡೆಯುತ್ತಿದೆ.

‘ನಗರಸಭೆಯಲ್ಲಿನ ವಿವಿಧ ವಿಭಾಗ­ದಲ್ಲಿ ಕಾರ್ಯ ನಿರ್ವಹಿಸು­ತ್ತಿರುವ ಅಧೀನ ಸಿಬ್ಬಂದಿಯ ಮೇಲೂ ಕಣ್ಗಾ­ವಲಿಗೆ ಸಾಧ್ಯವಾಗುತ್ತದೆ. ಇದರಿಂದ ಆಡಳಿತ ಸುಧಾರಣೆಯ ಜೊತೆಗೆ ಸಿಬ್ಬಂದಿಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗಲಿದೆ’ ಎಂದು ಪೌರಾಯುಕ್ತ ನಿಂಗಣ್ಣ ಕುಮ್ಮಣ್ಣನ­ವರ್ ಹೇಳಿದರು.

‘ಈ ಮೊದಲು ನಗರಸಭೆಯ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್‌ ಕದಿಯುವುದು, ಯಂತ್ರಹಳ ಬಿಡಿ ಭಾಗ ಕಳ್ಳತನವಾಗುವಂತ ಸಮಸ್ಯೆ ಇತ್ತು. ಕ್ಯಾಮೆರಾ ಅಳವಡಿಕೆಯಿಂದ ಕಳ್ಳತನ ತಡೆಗಟ್ಟಿದಂತಾಗುತ್ತದೆ’ ಎಂದು ಪರಿಚಾರಕ ಬಸಣ್ಣ ಹೇಳಿದರು.

ಎಂಜಿನಿಯರಿಂಗ್ ವಿಭಾಗ, ಸಿಬ್ಬಂದಿ ಶಾಖೆ, ಕಂದಾಯ ವಿಭಾಗ, ನೈರ್ಮಲ್ಯ, ನಗರಸಭೆಯ ದ್ವಾರ ಬಾಗಿಲು, ಪೌರಾಯುಕ್ತರ ಕಚೇರಿ ಮುಂಭಾಗ, ನಗರಸಭೆಯ ಆವರಣದ ಹೊರ ಭಾಗ ಕಾಣುವಂತೆ ಹೀಗೆ ಒಟ್ಟು ಎಂಟು ಕಡೆ ಕ್ಯಾಮೆರಾ ಅಳವಡಿಸಲಾಗಿದೆ.
ಎಲ್ಲ ಕ್ಯಾಮೆರಾಗಳ ದೃಶ್ಯ ಸಂಪರ್ಕವನ್ನು ಪೌರಾಯುಕ್ತ ನಿಂಗಣ್ಣ ಕುಮ್ಮಣ್ಣನವರ ಕಚೇರಿಯಲ್ಲಿ ಅಳವಡಿಸ­ಲಾಗಿರುವ ಮಾನಿಟರ್ಗೆ   ಕಲ್ಪಿಸಲಾಗಿದೆ. ಹೀಗಾಗಿ ಪೌರಾಯುಕ್ತರಿಗೆ ಕಚೇರಿ­ಯಲ್ಲಿನ ವಿದ್ಯಮಾನಗಳ ಅವಲೋಕನಕ್ಕೆ ಅವಕಾಶ ದೊರೆತಿದೆ.

ಬಯೋಮೆಟ್ರಿಕ್: ಸಿಸಿ ಕ್ಯಾಮೆರಾದ ಬಳಿಕ ಎರಡನೇ ಹಂತದ ಸುಧಾರ­ಣೆಗಾಗಿ ಯಂತ್ರದ ಮೂಲಕ ‘ಸಿಬ್ಬಂದಿ ಹಾಜರಾತಿ ಪಡೆ­ಯಲು ನಗರಸಭೆ­ಯಲ್ಲಿ ಶೀಘ್ರ ಬಯೋಮ್ಯಾಟ್ರಿಕ್ ವ್ಯವಸ್ಥೆ ಅಳವಡಿ­ಸಿಕೊಳ್ಳಲು ಚಿಂತನೆ ನಡೆಸಿದೆ. ಇದರಿಂದ ಸಿಬ್ಬಂದಿ ಅಲೆದಾಟ ತಪ್ಪ­ಲಿ­ದೆ’ ಎಂದು ಪೌರಾಯುಕ್ತ ತಿಳಿಸಿದ್ದಾರೆ.

ಈಗಾಗಲೆ ಹುಬ್ಬಳ್ಳಿ ಮೂಲದ ಸಂಸ್ಥೆ­ಯೊಂದಕ್ಕೆ ಗುತ್ತಿಗೆ ನೀಡಿದ್ದು, ಸೆಪ್ಟಂ­ಬರ್ ಮೂರನೇ ವಾರದಲ್ಲಿ ನಗರಸಭೆ­ಯಲ್ಲಿ ಬಯೋಮ್ಯಾಟ್ರಿಕ್ ವ್ಯವಸ್ಥೆ ಜಾರಿ­ಯಾಗಲಿದೆ. ಸಿಬ್ಬಂದಿ ದಿನದ ಎರಡು ಬಾರಿ ತಮ್ಮ ಗುರುತಿನ ಚೀಟಿ ತೋರಿಸಿ ಹಾಜರಾತಿ ಹಾಕಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.