ADVERTISEMENT

ಗಂಗಾವತಿ: ರಥೋತ್ಸವಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಗಂಗಾವತಿ: ನಗರದ ಹಿರೇಜಂತಕಲ್‌ನಲ್ಲಿರುವ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರನ ಬ್ರಹ್ಮೋತ್ಸವದ ಅಂಗವಾಗಿ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ರಥೋತ್ಸವಕ್ಕೆ ವೀಕ್ಷಣೆಗೆ ಗಂಗಾವತಿ ಸುತ್ತಲಿನ ಆನೆಗೊಂದಿ, ಬಸವಾಪಟ್ಟಣ, ಹೇರೂರು, ಚಿಕ್ಕಜಂತಕಲ್, ಹುಲಿಗಿ ಮೊದಲಾದ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಟ್ರ್ಯಾಕ್ಟರ್, ಆಟೋ ಮತ್ತು ಎತ್ತಿನ ಬಂಡಿಯಲ್ಲಿ ಆಗಮಿಸಿ ವಿರೂಪಾಕ್ಷನ ದರ್ಶನ ಪಡೆದು ಪುನೀತರಾದರು.

ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ನಡೆದ ಮಡಿ ತೇರಿಗೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಕಂದಾಯ ಇಲಾಖೆ,ಜಾತ್ರೋತ್ಸವ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.ಬ್ರಹ್ಮೋತ್ಸವದ ಅಂಗವಾಗಿ ಬೆಳಗಿನಿಂದ ಪಂಪಾ ವಿರೂಪಾಕ್ಷನಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವರ್ಚನೆ ನಡೆದವು. ಬೆಳಗಿನಿಂದಲೆ ಸರದಿಯಲ್ಲಿ ನಿಂತ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ವಿವಿಧ ಸಮಾಜದವರು ಬೃಹದಾಕರದ ಹೂವಿನ ಹಾರಗಳನ್ನು ಮಲ್ಲಿಕಾರ್ಜುನ ಮಠದಿಂದ ಮೆರವಣಿಗೆಯಲ್ಲಿ ತಂದು ರಥಕ್ಕೆ ಸಮರ್ಪಿಸಿದರು. ಸಂಜೆ ದೇವಸ್ಥಾನದ ಆವರಣದಿಂದ ನಡೆದ ರಥೋತ್ಸವವು ಪಾದಗಟ್ಟೆಯವರೆಗೆ ಸಾಗಿ ಪುನಃ ದೇವಸ್ಥಾನಕ್ಕೆ ತರಲಾಯಿತು. ರಥೋತ್ಸವದಲ್ಲಿ ವಿವಿಧ ಪಕ್ಷ ಮತ್ತು ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಹಾಲಿ ಮಾಜಿ ಸಂಸದ, ಶಾಸಕರು, ಸಚಿವರು, ಸೇರಿದಂತೆ ನಗರಸಭೆ ಸದಸ್ಯರು, ತಾಪಂ, ಜಿಪಂ ಸದಸ್ಯರು, ಗಣ್ಯರು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ನೂತನ ವಧು- ವರರು ಪಂಪಾಪತಿ ದೇವರ ಮತ್ತು ರಥದ ದರ್ಶನ ಪಡೆದರೆ, ಶುಭವಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಜೋಡಿಗಳು ರಥೋತ್ಸವದ ಸಂದರ್ಭದಲ್ಲಿ ಕಂಡುಬಂದವು. ಇನ್ನು ಹತ್ತು ದಿನ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಸಂಭ್ರಮ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.