ADVERTISEMENT

ಜಿಲ್ಲಾಡಳಿತದ ವಿಶಿಷ್ಟ ಕಾರ‌್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:00 IST
Last Updated 14 ಜೂನ್ 2011, 9:00 IST

ಕೊಪ್ಪಳ: ಪಾಲಕರಿಗೆ ಉದ್ಯೋಗ ಇಲ್ಲ. ಇದರಿಂದಾಗಿ ಇಡೀ ಕುಟಂಬದ ಆರ್ಥಿಕ ಸ್ಥಿತಿಯೇ ಹದಗೆಡುವುದರಿಂದ ಮಕ್ಕಳನ್ನು ದುಡಿಮೆಗೆ ಕಳಿಸುವುದು ಸಾಮಾನ್ಯ. ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರಲು ಇದೂ ಪ್ರಮುಖ ಕಾರಣ.

ಆದರೆ, ಪಾಲಕರಿಗೆ ಯಾವುದಾದರೊಂದು ಕೆಲಸದಲ್ಲಿ ತರಬೇತಿ ನೀಡಿ, ಅವರು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಮಾಡಿದರೆ ಮಕ್ಕಳನ್ನು ದುಡಿಯಲು ಕಳಿಸುವುದನ್ನು ನಿಲ್ಲಿಸುತ್ತಾರೆ.
ಇಂತಹ ಯೋಚನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಈ ನೂತನ ಕಾರ್ಯಕ್ರಮ ಕುರಿತು ಸೋಮವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವು, ಈ ಮೊದಲು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಮಯದಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದರು.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಈ ಕಾರ್ಯಕ್ರಮ ಜಾರಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಕಾರ್ಯಕ್ರಮದ ಫಲವಾಗಿ 1500 ಜನ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕಾರ್ಖಾನೆಗಳು, ಬೀಜ ಸಂಸ್ಕರಣಾ ಘಟಕಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡು ಬಂದಿದೆ. ಇದಕ್ಕೆ ಮೂಲ ಕಾರಣ ಪಾಲಕರ ಆರ್ಥಿಕ ಸ್ಥಿತಿ. ಹೀಗಾಗಿ ಉತ್ತಮ ಆದಾಯ ತರುವ ಕಸುಬ ಇಲ್ಲವೇ ಕೌಶಲದಲ್ಲಿ ಅವರಿಗೆ ತರಬೇತಿ ನೀಡಿದರೆ ಈ ಬಾಲಕಾರ್ಮಿಕ ಪದ್ಧತಿಗೆ ವಿದಾಯ ಹೇಳಬಹುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಪ್ಲಂಬಿಂಗ್ ಕೆಲಸ, ಬಡಗಿತನದಲ್ಲಿ ಕೌಶಲ್ಯ ಮತ್ತಿತರ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಿಗಾಗಿ ಜಿಲ್ಲೆಯ ಜನರು ದೂರದ ಗದಗ, ಹುಬ್ಬಳ್ಳಿಗೆ ಹೋಗಬೇಕಾಗಿದೆ. ಇಂತಹ ಕಾರ್ಯದಲ್ಲಿ ಸೂಕ್ತ ತರಬೇತಿ ನೀಡಿದರೆ, ಸ್ಥಳೀಯವಾಗಿಯೇ ಮಾನವ ಸಂಪನ್ಮೂಲ, ಸೇವೆ ಲಭ್ಯವಾಗುವುದರಿಂದ ಜನರಿಗೂ ಮತ್ತು ಕೆಲಸ ಕಲಿತವರಿಗೂ ಅನುಕೂಲವಾಗುತ್ತದೆ ಎಂದು ತಮ್ಮ ಯೋಜನೆಯ ರೂಪುರೇಷೆಯನ್ನು ವಿವರಿಸಿದರು.

ಸಮೀಕ್ಷೆ: ಈ ಕಾರ್ಯಕ್ರಮಕ್ಕೆ ಪೂರಕವಾಗಿ ಜೂ. 15ರಿಂದ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಆಯಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಈ ಸಮೀಕ್ಷೆ ನಡೆಸುವರು. ಆಯಾ ಗ್ರಾಮದಲ್ಲಿನ 18 ರಿಂದ 35 ವರ್ಷ ವಯೋಮಾನದ ಪುರುಷರು ಹಾಗೂ ಮಹಿಳೆಯರು ತಾವು ಯಾವ ಕೆಲಸ-ಕೌಶಲದಲ್ಲಿ ತರಬೇತಿ ಪಡೆಯಲು ಇಚ್ಛಿಸುತ್ತಾರೆ ಎಂಬ ಬಗ್ಗೆ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ನೀಡಬೇಕು.

ಈ ಸಮೀಕ್ಷೆ ತಿಂಗಳ ಪೂರ್ತಿ ನಡೆಯಲಿದೆ. ನಂತರ ಎಲ್ಲ ವಿವರಗಳನ್ನು ಸಂಗ್ರಹಿಸಿ, ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿ/ಸಂಸ್ಥೆಗಳನ್ನು ನಿಗದಿಪಡಿಸುವುದು, ಸಂಬಂಧಪಟ್ಟ ಇಲಾಖೆುಯ ಅನುಮೋದನೆ ಪಡೆದು ಕಾರ್ಯಕ್ರಮ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ನಂತರ ತರಬೇತಿ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜಿಸಿರುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.