ADVERTISEMENT

ತರಬೇತಿ: ಸರ್ಕಾರಿ ನೌಕರರಲ್ಲಿ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 9:55 IST
Last Updated 23 ಜುಲೈ 2012, 9:55 IST
ತರಬೇತಿ: ಸರ್ಕಾರಿ ನೌಕರರಲ್ಲಿ ನಿರಾಸಕ್ತಿ
ತರಬೇತಿ: ಸರ್ಕಾರಿ ನೌಕರರಲ್ಲಿ ನಿರಾಸಕ್ತಿ   

ಕೊಪ್ಪಳ: ಸರ್ಕಾರಿ ನೌಕರರಿಗೆ ನಾಗರಿಕ ಸೇವಾ ನಿಯಮಗಳು, ಮೇಲಿಂದ ಮೇಲೆ ಸರ್ಕಾರ ಹೊರಡಿಸುವ ಸುತ್ತೋಲೆ, ಜಾರಿಗೆ ತರುವ ಯೋಜನೆಗಳ ಕುರಿತು ಮಾಹಿತಿ ಅಗತ್ಯ. ಕಂಪ್ಯೂಟರ್ ಬಳಕೆ, ಹೊಸ ಭೂಮಿ, ಪಂಚತಂತ್ರ ಸೇರಿದಂತೆ ಆಯಾ ಇಲಾಖೆಯಲ್ಲಿ ಬಳಸುವ ತಂತ್ರಾಂಶದ ಬಗ್ಗೆ ನೌಕರರಿಗೆ ತರಬೇತಿಯೂ ಅವಶ್ಯ. ಈ ಎಲ್ಲ ಪ್ರಕ್ರಿಯೆಗಳಿಂದ ಪ್ರತಿಯೊಬ್ಬ ಸರ್ಕಾರಿ ನೌಕರನಲ್ಲಿ ದಕ್ಷತೆ, ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯವಾಗಲಿದೆ ಎಂಬ ಆಶಯವೂ ಇದೆ.

ಈ ಎಲ್ಲ ಉದ್ದೇಶ ಈಡೇರಿಕೆಗಾಗಿ ನಗರದಲ್ಲಿ 2010ರ ಡಿ. 29ರಂದು ಜಿಲ್ಲಾ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಆದರೆ, ಸಂಸ್ಥೆ ಕಾರ್ಯಾರಂಭ ಮಾಡಿದ್ದು ಮಾತ್ರ 2011ರ ಜುಲೈನಲ್ಲಿ. ಆದರೆ, ಜಿಲ್ಲೆಯಲ್ಲಿರುವ ಸರ್ಕಾರಿ ನೌಕರರು ನಿರೀಕ್ಷಿತ ಮಟ್ಟದಲ್ಲಿ ಈ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳಿಗೆ ಹಾಜರಾಗುತ್ತಿಲ್ಲ ಎಂಬುದು ಗಮನಾರ್ಹ.

`ಹೊಸ ಜಿಲ್ಲೆಯಾದ ನಂತರ ಜಿಲ್ಲಾ ತರಬೇತಿ ಕೇಂದ್ರ ಇರಲಿಲ್ಲ. ಇದಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಬೇಕಿತ್ತು. ಹಲವಾರು ವರ್ಷಗಳ ಹೋರಾಟದ ಫಲವಾಗಿ ನಗರದಲ್ಲಿ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಆದರೆ, ನೌಕರರು ಇಲ್ಲಿ ನೀಡಲಾಗುವ ತರಬೇತಿಗೆ ಹಾಜರಾಗುತ್ತಿಲ್ಲ~ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ವಿಷಾದಿಸುತ್ತಾರೆ.

`ತರಬೇತಿಗೆ ನೌಕರರನ್ನು ಕಳಿಸುವಂತೆ ಎಲ್ಲ ಇಲಾಖೆಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಈಚೆಗೆ ವಿವಿಧ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಉಪಪ್ರಾಚಾರ್ಯ ಲಾಯಖ್ ಅಲಿ ಅಸಮಾಧಾನ ಹೇಳುತ್ತಾರೆ.

ಪ್ರತಿ ಸಲ ಎಲ್ಲ ಕಚೇರಿಗಳಿಗೆ ತೆರಳಿ ತರಬೇತಿಗೆ ನೌಕರರನ್ನು ಕಳುಹಿಸುವಂತೆ ಮನವಿ ಮಾಡುವುದು ಕಷ್ಟ. ಜಿಲ್ಲೆಯಲ್ಲಿ ನೌಕರರ ಕೊರತೆ ಇದೆ. ಆದರೆ, ತರಬೇತಿಯನ್ನೂ ಕಡೆಗಣಿಸುವಂತಿಲ್ಲ. ಸಮಯ ಹೊಂದಾಣಿಕೆ ಮಾಡಿಕೊಂಡು ಹಾಜರಾಗಬೇಕಾಗುತ್ತದೆ ಎಂದು ಹೇಳುತ್ತಾರೆ.

`ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ದಾಖಲೆಗಳ ಹಾಗೂ ಲೆಕ್ಕಪತ್ರಗಳ ನಿರ್ವಹಣೆಗೆ ಮಹತ್ವ ಬಂದಿದೆ. ಈ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದರಿಂದ ಎಲ್ಲ ನೌಕರರು ತರಬೇತಿಗೆ ಹಾಜರಾಗಬೇಕು~ ಎಂದು ಲಾಯಖ್ ಅಲಿ ಅಭಿಪ್ರಾಯಪಡುತ್ತಾರೆ.

ಸದ್ಯ ಸಂಸ್ಥೆಯಲ್ಲಿ ಒಂದೇ ಕೋಣೆ ಇದೆ. ಇದು ಸಹ ಹೆಚ್ಚಿನ ಸಂಖ್ಯೆಯ ನೌಕರರಿಗೆ ತರಬೇತಿ ನೀಡಲು ಅಡ್ಡಿಯಾಗುತ್ತಿದೆ. ಮತ್ತೊಂದು ಕೋಣೆ ಲಭಿಸಿದ ನಂತರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತರಬೇತಿ ನೀಡಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.