ADVERTISEMENT

ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ: ಸಚಿವ

ಬಸವರಾಜ ರಾಯರಡ್ಡಿಯಿಂದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 8:24 IST
Last Updated 12 ಆಗಸ್ಟ್ 2016, 8:24 IST
ಕೊಪ್ಪಳದಲ್ಲಿ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ  ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಇದ್ದರು
ಕೊಪ್ಪಳದಲ್ಲಿ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಇದ್ದರು   

ಕೊಪ್ಪಳ: ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ ಆರ್ಥಿಕ ಸದೃಢತೆ ಹೊಂದಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ಗುರುವಾರ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಮಾಡಲಾದ ತೆರಿಗೆ ಸಂಗ್ರಹದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಅವರು, ಈ ವರ್ಷ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಮಳಿಗೆಗಳ ಬಾಡಿಗೆ ಸಂಗ್ರಹ ಸೇರಿದಂತೆ ಎಲ್ಲ ಕರ ವಸೂಲಾತಿ ಸಂಗ್ರಹ ನಿಗದಿತ ಗುರಿ ತಲುಪಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೊಪ್ಪಳ ನಗರಸಭೆಯಲ್ಲಿ ಆಸ್ತಿ ತೆರಿಗೆ, ನೀರಿನ ಕರ ವಸೂಲಾತಿ ಹಾಗೂ ಮಳಿಗೆಗಳ ಬಾಡಿಗೆ ವಸೂಲಾತಿ ಸೇರಿದಂತೆ ಒಟ್ಟು ₹ 4. 6 ಕೋಟಿ ತೆರಿಗೆ ಸಂಗ್ರಹಿಸಬೇಕಿದೆ. ಈ ಪೈಕಿ ನೀರಿನ ಕರ ವಸೂಲಾತಿ ₹ 1.19 ಕೋಟಿ ವಸೂಲಿ ಮಾಡಬೇಕಿದೆ.

2015-16ರಲ್ಲಿ ಕೇವಲ ₹ 3 ಕೋಟಿ ತೆರಿಗೆ ವಸೂಲಾತಿ ಆಗಿದೆ. ಹೀಗಾದರೆ ಅಭಿವೃದ್ಧಿ ಕಾರ್ಯಕ್ರಮ ಗಳಿಗೂ ಅನುದಾನದ ಕೊರತೆ ಆಗಲಿದೆ. ನಗರಸಭೆಯ ಇನ್ನು ಕೊಪ್ಪಳ ನಗರ ಸಭೆಯ ವ್ಯಾಪ್ತಿಯಲ್ಲಿ ಒಟ್ಟು 92 ಮಳಿಗೆ ಗಳಿದ್ದು, ಅವುಗಳ ಬಾಡಿಗೆ ಪರಿಷ್ಕರಿಸ ಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

ಎಸ್‌ಎಫ್‌ಸಿ ಅನುದಾನದಲ್ಲಿ 2015-16ರಲ್ಲಿ ₹ 2.58 ಕೋಟಿ ಅನುದಾನ ಒದಗಿಸಲಾಗಿದ್ದು, ಇದುವ ರೆಗೂ ಶೇ 76ರಷ್ಟು ಸಾಧನೆಯಾಗಿದೆ. 2016-17ನೇ ಸಾಲಿಗೆ ₹ 3.16 ಕೋಟಿ ಅನುದಾನ ಹಂಚಿಕೆಯಾಗಿದೆ. ಈ ಸಂಬಂಧಿಸಿ ಕ್ರಿಯಾ ಯೋಜನೆಯನ್ನು ಕೂಡಲೆ ಅನುಮೋದನೆಗೆ ಸಲ್ಲಿಸಬೇಕು ಎಂದು ಸೂಚಿಸಿದರು.

13ನೇ ಹಣಕಾಸು ಆಯೋಗದಲ್ಲಿ ಕೊಪ್ಪಳ ನಗರಸಭೆಗೆ 2014-15ನೇ ಸಾಲಿನಲ್ಲಿ ₹ 44. 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ವೆಚ್ಚ ಆಗಿಲ್ಲ. ಆದ್ದರಿಂದ 13ನೇ ಹಣಕಾಸು ಆಯೋಗದ ಬಾಕಿ ಕಾಮಗಾರಿಗಳು ಹಾಗೂ 14ನೇ ಹಣಕಾಸು ಆಯೋಗದ ನಿಗದಿತ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಕ್ಕೆ 24X7 ನೀರು ಸರಬರಾಜು ಕಾಮಗಾರಿ ಪ್ರಗತಿಯ ಹಂತದಲ್ಲಿದೆ.  ಆದರೆ ಕೆಲ ತಾಂತ್ರಿಕ ಅಡಚಣೆ ಉಂಟಾ ಗಿದ್ದು, 3.74 ಕಿಲೋಮೀಟರ್‌ನಷ್ಟು ಪೈಪ್‌ಲೈನ್ ಕಾಮಗಾರಿಗೆ ಅಡ್ಡಿಯಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ದೊರೆಯುವುದು ವಿಳಂಬವಾಗುತ್ತಿದೆ ಎಂದು ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರ ವೀರೇಂದ್ರಗೌಡ ಅವರು ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಯ ಕಚೇರಿಯು ಬೆಂಗಳೂರಿನಲ್ಲಿ ಇದ್ದು, ಈ ಕುರಿತಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುಮತಿ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗಂಗಾವತಿ ನಗರಸಭೆ ಮಳಿಗೆಗಳ ಬಾಡಿಗೆ ದರ ಕೊಪ್ಪಳ ನಗರಕ್ಕಿಂತಲೂ ಕಡಿಮೆ ವಸೂಲಿ ಆಗುತ್ತಿದೆ. ಎಲ್ಲ ಮಳಿಗೆ ಗಳ ಬಾಡಿಗೆ ದರವನ್ನು ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿಯಂತೆ ಪರಿಷ್ಕರಿಸಬೇಕು. ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿ, ಹಂಚಿಕೆ ಮಾಡುವುದು ಸೂಕ್ತ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ಜಿಲ್ಲೆಯ ನೂತನ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಎಂಜಿ ನಿಯರ್‌ಗಳ ಕೊರತೆ ಇದೆ. ಹೀಗಾಗಿ,  ಕ್ರಿಯಾಯೋಜನೆ ರೂಪಿಸಲು ವಿಳಂಬ ವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಕಿರಿಯ ಎಂಜಿನಿಯರ್‌ ಗಳನ್ನು ವಾರಕ್ಕೆ ಎರಡು ದಿನಗಳಂತೆ ಕೆಲಸ ನಿರ್ವಹಿಸಲು ಈಗಾಗಲೆ ಆದೇಶ ಮಾಡಲಾಗಿದೆ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.