ADVERTISEMENT

ದಾಖಲೆಯಲ್ಲಿ ಪೂರ್ಣ ವಾಸ್ತವದಲ್ಲಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 7:45 IST
Last Updated 4 ಜೂನ್ 2011, 7:45 IST

ಕುಷ್ಟಗಿ: ಪಟ್ಟಣದ ನಾಯಕವಾಡಿ ಓಣಿ (16ನೇ ವಾರ್ಡ್)ಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ಅಪೂರ್ಣ ಸ್ಥಿತಿಯಲ್ಲಿದ್ದರೂ ಇಲ್ಲಿಯ ಪುರಸಭೆಯ ಪ್ರಗತಿ ವರದಿಯಲ್ಲಿ ಮಾತ್ರ ಪೂರ್ಣಗೊಂಡಿರುವುದು ಬೆಳಕಿಗೆ ಬಂದಿದೆ.

2008-09ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ, ರೂ 9 ಲಕ್ಷ ವೆಚ್ಚದ ಈ ಕಟ್ಟಡದ ನಿರ್ಮಾಣದಿಂದ ಆ ಭಾಗದ ಜನರಿಗೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶ ಹೊಂದಲಾಗಿದೆ. ಆದರೆ ಕಾಮಗಾರಿ ಆರಂಭಗೊಂಡು ನಾಲ್ಕೈದು ವರ್ಷಗಳು ಕಳೆದರೂ ಶೀಘ್ರದಲ್ಲಿ ಮುಗಿಯುವ ಸೂಚನೆಯೇ ಇಲ್ಲ.

ಆರಂಭದ್ಲ್ಲಲಿ ಆಕ್ಷೇಪಿಸಿದರೂ ಅದನ್ನು ಲೆಕ್ಕಿಸದೇ ಕಳಪೆ ಕಾಮಗಾರಿ ನಡೆಸಲಾಗಿದೆ. ಗೋಡೆ ಮತ್ತು ಕಿಟಕಿಗಳಿಗೆ ಕಳಪೆ ಇಟ್ಟಿಗೆ ಮತ್ತು ಕಟ್ಟಿಗೆಗಳನ್ನು ಬಳಸಲಾಗಿದೆ. ಅಲ್ಲದೇ ಬಾಗಿಲಿಗೆ ಕಳಪೆ ಕಟ್ಟಿಗೆ ಇಡುವುದನ್ನು ವಿರೋಧಿಸಿದ್ದರಿಂದ ಹಾಗೇ ಇರಿಸಲಾಗಿದೆ ಎಂದು ಜನ ದೂರಿದರು.

ಸದರಿ ಕಾಮಗಾರಿಯ ಟೆಂಡರ್ ಅನ್ನು ತಾವರಗೇರಾದ ರುದ್ರಗೌಡ ಎಂಬುವವರು ಪಡೆದಿದ್ದಾರೆ. ಆದರೆ ಕಾಮಗಾರಿ ಮುಗಿಯದಿದ್ದರೂ ಪೂರ್ಣಗೊಂಡಿದೆ ಎಂದು ದಾಖಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ  ಕೆಲಸ ಮುಗಿಯದಿದ್ದರೂ ಗುತ್ತಿಗೆದಾರರಿಗೆ ರೂ 8 ಲಕ್ಷ ಹಣವನ್ನು ಪಾವತಿಸಿರುವುದು ಅಚ್ಚರಿ ಮೂಡಿಸಿದೆ.

ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು, ಕಳಪೆಯಾಗಿರುವುದು ಮತ್ತು ಮುಗಿಯುವ ಮೊದಲೇ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಗೊತ್ತಿದ್ದರೂ ಈ ವಾರ್ಡಿನ ಸದಸ್ಯೆ ದೇವಮ್ಮ ನಾಯಕವಾಡಿ ಮೌನ ವಹಿಸಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಲಾಟ್ನೆ ಅವರನ್ನು ಸಂಪರ್ಕಿಸಿದಾಗ ಅದರ ಬಗ್ಗೆ ಏನನ್ನೂ ಹೇಳಲಿಲ್ಲ.

ಅಪೂರ್ಣ ಕಾಮಗಾರಿಯಿಂದಾಗಿ ಮುಲ್ಲಿಕಾರ್ಜುನ ಸಮುದಾಯ ಭವನ ಅನೈತಿಕ ಚಟುವಟಿಕೆಗಳ ತಾಣ, ಹಂದಿಗಳ ವಾಸಸ್ಥಳವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.