ADVERTISEMENT

ದೀಪಾವಳಿ: ಖರೀದಿ ಜೋರು!

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 8:55 IST
Last Updated 14 ನವೆಂಬರ್ 2012, 8:55 IST

ಗಂಗಾವತಿ: ದೀಪಾವಳಿ ಹಬ್ಬದ ದಿನವಾದ ಮಂಗಳವಾರ ನಗರದಲ್ಲಿ ಎಲ್ಲಿ ನೋಡಿದರೂ ಬರಿ ಜನಸಂದಣಿ ಕಂಡು ಬಂತು. ಬಟ್ಟೆ, ಅಗತ್ಯ ವಸ್ತು, ದಿನಸಿ, ತರಕಾರಿ, ಹಣ್ಣು-ಹಂಪಲ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ ವ್ಯಾಪಾರ ವಹಿವಾಟು ಕಡಿಮೆ ಎನಿಸಿತ್ತು. ಆದರೆ ಸಂಜೆಯ ಹೊತ್ತಿಗೆ ವ್ಯಾಪಾರ ಕೊಂಚ  ಸುಧಾರಿಸಿತು. ಆದರೆ ಕಳೆದ ಸಾರಿಗೆ ಹೋಲಿಸಿದರೆ ಈ ಬಾರಿಯ ದೀಪಾವಳಿ ನೆಮ್ಮದಿ ತಂದಿದೆ ಎಂದು ಹಣ್ಣುಗಳ ವರ್ತಕರಾದ ಮಂಜುಳಾ, ಶಾಂತಬಾಯಿ, ಲಚ್ಚಮ್ಮ ಹೇಳಿದರು.

ಮಾರುಕಟ್ಟೆ ಮತ್ತು ಹಬ್ಬದ ವಸ್ತುಗಳ ಖರೀದಿಗೆ ಗ್ರಾಹಕ ಆಸಕ್ತಿ ತೋರಿದ್ದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದ ದೃಶ್ಯ ನಗರದ ಮುಖ್ಯ ರಸ್ತೆಗಳ ಅಂಗಡಿ ಮುಂಗಟ್ಟುಗಳಲ್ಲಿ ಸಾಮಾನ್ಯವಾಗಿ ಕಂಡು ಬಂತು.

ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ಆದರೆ ಬೆಲೆ ಏರಿಕೆ ಬಿಸಿ ಹಬ್ಬದ ಸಂಭ್ರಮಕ್ಕೆ ಧಕ್ಕೆತರಲಿಲ್ಲ. ಗ್ರಾಹಕರು ಬೆಲೆ ಏರಿಕೆಯ ಬಗ್ಗೆ ಗೊಣಗುತ್ತಲೆ ಭರ್ಜರಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.

ಕಳೆದ ಬಾರಿ ಭತ್ತಕ್ಕೆ ಸೂಕ್ತ ಬೆಲೆ ದೊರೆಯದ್ದರಿಂದ ರೈತರು ದೀಪಾವಳಿಯ ಬಗ್ಗೆ ಆಸಕ್ತಿ ವಹಿಸದ್ದರಿಂದ ಹಬ್ಬ ನಿಸ್ತೇಜವಾಗಿತ್ತು. ಆದರೆ ಈ ಬಾರಿ ಕಟಾವು ಆರಂಭವಾಗುವ ಮುನ್ನವೇ ಭತ್ತಕ್ಕೆ ಬೇಡಿಕೆ ಲಭಿಸುತ್ತಿರುವುದು ಹಬ್ಬದ ಸಂಭ್ರಮಕ್ಕೆ ಕಾರಣವಾಗಿದೆ.  ದೀಪಾವಳಿ ಹಬ್ಬ ಆರಂಭವಾಗುವ ಮುನ್ನ ಅಂದರೆ ಕಳೆದ ನಾಲ್ಕಾರು ದಿನಗಳಿಂದ ನಗರದ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ನಡೆದಿದೆ. ಹೂವಿನ ಅಂಗಡಿಯಿಂದ ಹಿಡಿದು ಜುವೇಲ್ಲರಿ ಅಂಗಡಿವರೆಗೆ ಎಲ್ಲೆಡೆ ಜನಸಂದಣಿ ಕಂಡು ಬಂತು.

ನಗರದ ಬಹುತೇಕ ಬಟ್ಟೆ ಅಂಗಡಿ ಗ್ರಾಹಕರಿಂದ ತುಂಬಿದ್ದವು. `ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುವುದರಿಂದ ಪೂಜಾ ಸಾಮಾಗ್ರಿಗಳಾದ ಹೂವು, ಹಣ್ಣು, ಕಾಯಿ, ಅಲಂಕಾರಿಕ ವಸ್ತುಗಳ ಮಾರಾಟವೂ ಈಬಾರಿ ಪರವಾಗಿಲ್ಲ~ ಎಂದು ವರ್ತಕ ಶ್ರೀಕಾಂತ ತಿಳಿಸಿದರು.

ಮನೆಯ ಅಲಂಕಾರಕ್ಕೆ ಆಕಾಶಬುಟ್ಟಿ, ಮಾವಿನ ತೋರಣ, ಹಣತೆ ಹಣ್ಣು-ಹಂಪಲ ಮತ್ತಿತರ ವಸ್ತು ಕೊಳ್ಳಲು ಮಹಿಳೆಯರು ಆಸಕ್ತಿ ತೋರಿದರೆ, ಪಟಾಕಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು ಯುವಕ-ಯುವತಿಯರು ತೊಡಗಿದ್ದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.