ADVERTISEMENT

ನೆಮ್ಮದಿ:ಗ್ರಾಮಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:40 IST
Last Updated 17 ಅಕ್ಟೋಬರ್ 2012, 8:40 IST
ನೆಮ್ಮದಿ:ಗ್ರಾಮಸ್ಥರ ಪರದಾಟ
ನೆಮ್ಮದಿ:ಗ್ರಾಮಸ್ಥರ ಪರದಾಟ   

ಕನಕಗಿರಿ: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ ಸೇರಿದಂತೆ ಇತರೆ ಪ್ರಮಾಣ ಪತ್ರದ  ಸೌಲಭ್ಯಕ್ಕಾಗಿ ತೆರೆದಿರುವ `ನೆಮ್ಮದಿ ಕೇಂದ್ರ~ದ ಬಾಗಿಲು ಕಳೆದ ಎರಡ್ಮೂರು ತಿಂಗಳಿಂದಲೂ ಮುಚ್ಚಿರುವುದರಿಂದ ಗ್ರಾಮಸ್ಥರು, ವಿವಿಧ ಗ್ರಾಮದ ವಿದ್ಯಾರ್ಥಿಗಳು, ಪಾಲಕರು ಪರದಾಟ ನಡೆಸಿದ್ದಾರೆ.    

ಬ್ಯಾಂಕ್ ಸಾಲ, ಇತರೆ ಸರ್ಕಾರಿ ಸೌಲಭ್ಯಕ್ಕಾಗಿ ಪಹಣಿ ಪ್ರತಿ ಅವಶ್ಯಕವಾಗಿ ಬೇಕಾಗಿದ್ದು ನೆಮ್ಮದಿ ಕೇಂದ್ರ ಬಂದ್ ಮಾಡಿರುವುದರಿಂದ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಕನಕಗಿರಿ, ಗಂಗಾವತಿಗೆ ಜನ ಹೋಗಬೇಕಾಗಿದೆ, ಅಲ್ಲಿ ಕೇಳಿದರೆ ಕಂಪ್ಯೂಟರ್ ಆಪರೇಟರ್ ಅವರು ನಿಮ್ಮ ಊರಿನಲ್ಲಿಯೆ ಪಡೆದುಕೊಳ್ಳಿ ಎಂದು ತಿಳಿಸುತ್ತಾರೆ ಹೀಗಾಗಿ ಜನ ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರಾಯಚೂರು ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹನುಮೇಶ ನಾಯಕ ತಿಳಿಸುತ್ತಾರೆ.

ಸರ್ಕಾರಿ ನೌಕರಿ, ಹೆರಿಗೆ ಭತ್ಯೆಗಳಿಗಾಗಿ ಜಾತಿ, ಆದಾಯ ಪ್ರಮಾಣ ಪತ್ರ ಬೇಕಾಗಿದ್ದು ನೆಮ್ಮದಿ ಕೇಂದ್ರ ತೆರೆಯದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ತೀರ ತೊಂದರೆಯಾಗಿದೆ. ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ನೀಡುವುದಕ್ಕೆ ಆಯಾ ಇಲಾಖೆಗಳು ಅರ್ಜಿ ಸಲ್ಲಿಸಿದ್ದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
 
ಸಂಬಂಧಿಸಿದ ಪ್ರಮಾಣ ಪತ್ರ ಪಡೆಯಲು ಹಣ ಖರ್ಚು ಮಾಡಿಕೊಂಡು ದಿನಲೂ ಇಲ್ಲಿಗೆ ಬಂದು ಬರೀಗೈಯಲ್ಲಿ ಹೋಗಬೇಕಾಗಿದೆ  ಎಂದು ಗೌರಿಪುರ, ಹೊಸಗುಡ್ಡ, ಹಿರೇಖ್ಯಾಡ, ಇಂಗಳದಾಳ, ಚಿಕ್ಕಖ್ಯಾಡ, ಶಿರಿವಾರ, ಅಡವಿಬಾವಿ, ಕನ್ನೇರಮಡಗು, ಹುಲಿಹೈದರ ಗ್ರಾಮಸ್ಥರು ದೂರಿದರು.  ಇಲ್ಲಿನ ನೆಮ್ಮದಿ ಕೇಂದ್ರದಲ್ಲಿ ಬ್ಯಾಟರಿ ವ್ಯವಸ್ಥೆ ಇಲ್ಲ. ವಿದ್ಯುತ್ ಇದ್ದರೆ ಮಾತ್ರ ಕೆಲಸ, ಅದೂ ಈಗ ನಿಂತಿದೆ ಎಂದು ಹನುಮೇಶ ನಾಯಕ ಅಸಮಾಧಾನ ವ್ಯಕ್ತಪಡಿಸಿದರು. 

ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಅವರ ಸಹ ಬೇಸರ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದರು. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ ವಿವಿಧ ಗ್ರಾಮದ ಬಡ ಜನತೆ ದಿನಲೂ ಕೇಂದ್ರದ ಬಾಗಿಲು ನೋಡಿಕೊಂಡು ಹೋಗುವ ಸ್ಥಿತಿ ಇದೆ ಎಂದು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಉಪಾಧ್ಯಕ್ಷ ಶಿವಶಂಕರ ಚೆನ್ನದಾಸರ ತಿಳಿಸಿದರು. ಅವ್ಯವಸ್ಥೆಯಿಂದ ಕೂಡಿದ ನೆಮ್ಮದಿ ಕೇಂದ್ರವನ್ನು ವಾರದೊಳಗೆ ಸರಿ ಪಡಿಸದಿದ್ದರೆ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.