ADVERTISEMENT

ನೆಮ್ಮದಿ ಕೆಂದ್ರದ ಮುಂದೆ ಪಾದರಕ್ಷೆಗಳ ಸರದಿ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:14 IST
Last Updated 8 ಜುಲೈ 2017, 6:14 IST
ಹನುಮಸಾಗರದ ನೆಮ್ಮದಿ ಕೇಂದ್ರದಲ್ಲಿ ವಿವಿಧ ಪ್ರಮಾಣಪತ್ರ ಪಡೆಯುವುದಕ್ಕಾಗಿ ಜನರು ಪಾದರಕ್ಷೆಗಳನ್ನು ಇಟ್ಟಿರುವುದು
ಹನುಮಸಾಗರದ ನೆಮ್ಮದಿ ಕೇಂದ್ರದಲ್ಲಿ ವಿವಿಧ ಪ್ರಮಾಣಪತ್ರ ಪಡೆಯುವುದಕ್ಕಾಗಿ ಜನರು ಪಾದರಕ್ಷೆಗಳನ್ನು ಇಟ್ಟಿರುವುದು   

ಹನುಮಸಾಗರ: ಇಲ್ಲಿನ ನೆಮ್ಮದಿ ಕೇಂದ್ರದಲ್ಲಿ ವಿವಿಧ ಪ್ರಮಾಣ ಪತ್ರ ಪಡೆಯುವುದಕ್ಕಾಗಿ ಪಾದರಕ್ಷೆಗಳನ್ನು ಸರದಿಯಲ್ಲಿ ಇಟ್ಟಿರುವುದು ಗುರುವಾರ ಕಂಡುಬಂತು.
ಪಹಣಿ ಪತ್ರಿಕೆ, ಆದಾಯ, ಜಾತಿ ಮತ್ತಿತರ ಪ್ರಮಾಣಪತ್ರಗಳ ಸಲುವಾಗಿ ಜನ ಧಾವಿಸಿಬರುತ್ತಿರುವುದು ಇಲ್ಲಿಯ ನೆಮ್ಮದಿ ಕೇಂದ್ರದ ಮುಂದೆ ಸಾಮಾನ್ಯ ದೃಶ್ಯವಾಗಿದೆ.

ಆರಂಭಕ್ಕೂ ಮುಂಚೆ ಬಂದ ಜನ ಗಂಟೆಗಟ್ಟಲೇ ಸರತಿಯಲ್ಲಿ ನಿಂತು ಕಾಲು ನೋವು ಮಾಡಿಕೊಳ್ಳುವ ಬದಲು ತಮ್ಮ ಸರದಿ ಭದ್ರಪಡಿಸಿಕೊಳ್ಳಲು ತಮ್ಮ ಪಾದರಕ್ಷೆಗಳನ್ನು ಇಟ್ಟು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ನಂತರ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಆರಂಭಿಸುತ್ತಿದ್ದಂತೆ ಸರದಿಯಲ್ಲಿ ನಿಂತು ತಮ್ಮ ಪ್ರಮಾಣ ಪತ್ರಕ್ಕಾಗಿ, ಪಹಣಿಗಾಗಿ ಅರ್ಜಿ ಸಲ್ಲಿಸುತ್ತಾರೆ.

ನೆಮ್ಮದಿ ಕೇಂದ್ರದಲ್ಲಿ ಒಬ್ಬರೇ ಕಂಪ್ಯೂಟರ್ ಆಪರೇಟರ್ ಇರುವುದು, ಆಗಾಗ ಸರ್ವರ್ ಕೈಕೊಡುವುದು ಇಂತಹ ಕಾರಣಗಳಿಂದ ಸರಿಯಾದ ಸಮಯಕ್ಕೆ ಪ್ರಮಾಣ ಪತ್ರಗಳು ಸಿಗದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ADVERTISEMENT

ಒಂದೇ ಸಮಯದಲ್ಲಿ ಬೆಳೆ ವಿಮೆ, ಬೆಳೆಹಾನಿ ಪರಿಹಾರ, ಸಾಲ ಸೌಲಭ್ಯಕ್ಕೆ ಅರ್ಜಿ ಕರೆದಿದ್ದರಿಂದ ನೂಕುನುಗ್ಗಲು ಉಂಟಾಗಲು ಕಾರಣವಾಗಿದೆ, ಈ ಮಧ್ಯದಲ್ಲಿ ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರ ನಿಗದಿತ ಸಮಯದಲ್ಲಿಯೇ ಪಡೆಯವುದು ಇದೆ.

ಇಲ್ಲಿಯ  ನೆಮ್ಮದಿ ಕೇಂದ್ರದಲ್ಲಿ ಕೇವಲ ಒಬ್ಬರೇ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಇದ್ದುದರಿಂದ ನೆಮ್ಮದಿ ಕೇಂದ್ರಕ್ಕೆ ಸಂಬಂಧಿಸಿದ ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಾಸಸ್ಥಳ, ಭೂ ಹಿಡುವಳಿ, ಗೇಣಿ ಮುಂತಾದವುಗಳ ಅರ್ಜಿ ಪಡೆಯುವುದು ಮತ್ತು ಪ್ರಮಾಣ ಪತ್ರಗಳನ್ನು ನೀಡುವದು ಒತ್ತಡದ ಕೆಲಸವಾಗಿದೆ. ಆದ್ದರಿಂದ ಕನಿಷ್ಠ ಇನ್ನೊಬ್ಬ ಸಿಬ್ಬಂದಿಯನ್ನಾದರೂ ನೇಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.