ADVERTISEMENT

ಪಟ್ಟಭದ್ರರಿಗೆ ಶಿಕ್ಷಕ ಸಂಘಗಳ ಶ್ರೀರಕ್ಷೆ!

ಪ್ರಜಾವಾಣಿ ವಿಶೇಷ
Published 8 ಆಗಸ್ಟ್ 2012, 8:05 IST
Last Updated 8 ಆಗಸ್ಟ್ 2012, 8:05 IST

ಕುಷ್ಟಗಿ: ಮಾಧ್ಯಮ, ತರಗತಿ ಮತ್ತು ಮಕ್ಕಳ ಸಂಖ್ಯೆ ಆಧರಿಸಿ ಸಿದ್ಧಪಡಿಸಲಾಗಿರುವ ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ಸ್ಥಳಾಂತರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕ್ರಿಯೆ ಮುಂದುವರೆದಿದೆ. ಆದರೆ ಅನೇಕ ವರ್ಷಗಳಿಂದ ಒಂದೇಕಡೆ ತಳವೂರಿರುವ ಅನೇಕ ಶಿಕ್ಷಕರು ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಿಗೆ ನೀಡಿರುವ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಮತ್ತೆ ಪಟ್ಟ ಭದ್ರಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಆದೇಶದ ಪ್ರಕಾರ ಪ್ರೌಢಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಸಹ ಶಿಕ್ಷಕ ಹುದ್ದೆಗಳನ್ನು ಗುರುತಿಸಿ ವಿಭಾಗ ಮಟ್ಟದಲ್ಲಿ ಅಗತ್ಯವಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರತಿ ವರ್ಷ ಸ್ಥಳಾಂತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿರುವ ಶಿಕ್ಷಕರುಗಳ ಪೈಕಿ ಸದರಿ ಹುದ್ದೆಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವವರನ್ನು ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಲಾಗುತ್ತದೆ.

ಮೂಲಗಳ ಪ್ರಕಾರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದ್ದು ಅಗತ್ಯವಿರುವ ಕಡೆ ಸ್ಥಳಾಂತರಿಸುವುದಕ್ಕೆ ಉಪನಿರ್ದೇಶಕರ ಕಚೇರಿ ಪಟ್ಟಿ ಸಿದ್ಧಪಡಿಸಿದೆ ಎಂದು ತಿಳಿದಿದೆ.

ಶೇಕಡ 40ಕ್ಕಿಂತ ಹೆಚ್ಚಿನ ಅಂಗವಿಕಲತೆ, ಮಾಜಿ ಸೈನಿಕರ ಪತ್ನಿಯಾಗಿರುವ ಶಿಕ್ಷಕಿಯರು, ವಿಧವೆ, ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರು, ಮುಂದಿನ ಎರಡು ವರ್ಷಗಳಲ್ಲಿ ನಿವೃತ್ತಿ ಅಂಚಿನಲ್ಲಿ ಇರುವವರು, ಮಾನ್ಯತೆ ಪಡೆದ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದ ವರೆಗಿನ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಗಳಿಗೆ ಹೆಚ್ಚುವರಿ ಹುದ್ದೆಯಿಂದ ವಿನಾಯಿತಿ ನೀಡಲಾಗಿದೆ.

ಉಪನಿರ್ದೇಶಕರು ಸಿದ್ಧಪಡಿಸಿರುವ ಹೆಚ್ಚುವರಿ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಗೆ ಸದರಿ ಶಿಕ್ಷಕರಿಂದ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಒಟ್ಟು 19 ಸಹ ಶಿಕ್ಷಕರು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

ಅಚ್ಚರಿಯ ಸಂಗತಿಯಂದರೆ ಬೆರಳೆಣಿಕೆ ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ತಾವು ಸಂಘದ ಪದಾಧಿಕಾರಿಗಳು ಎಂದು ದಾಖಲೆಗಳನ್ನು ನೀಡಿ ತಳ ಗಟ್ಟಿಮಾಡಿಕೊಳ್ಳಲು ಯತ್ನಿಸಿರುವುದು ಕಂಡುಬಂದಿದೆ. ಕೆಲವರಂತೂ ತಾವು ಹೋದರೆ ಶಾಲೆಯೇ ನಡೆಯುವುದಿಲ್ಲ ಎಂಬಂತೆ, ಇನ್ನೂ ಕೆಲವರು ಎಸ್‌ಡಿಎಂಸಿಯವರೇ ಬಿಡಲು ಸಿದ್ಧರಿಲ್ಲ ಎಂಬಂತೆ ಪ್ರಮಾಣಪತ್ರಗಳನ್ನು ಲಗತ್ತಿಸಿರುವುದು ಅಚ್ಚರಿ ಮೂಡಿಸಿದೆ.

ತಾಲ್ಲೂಕಿನಲ್ಲಿ ಪ್ರೌಢಶಾಲೆಯ ಮಾಧ್ಯಮಿಕ ಶಿಕ್ಷಕರ ಸಂಘ ಮತ್ತು ಸಹ ಶಿಕ್ಷಕರಿಗೆ ಸೇರಿದ ಎರಡು ಸೇರಿ ಒಟ್ಟು ಮೂರು ಪ್ರೌಢಶಾಲಾ ಶಿಕ್ಷಕರ ಸಂಘಗಳಿದ್ದು ಬಹುತೇಕ ಶಿಕ್ಷಕರು ಒಂದಿಲ್ಲ ಒಂದು ಸಂಘದಲ್ಲಿ ಪದಾಧಿಕಾರಿಗಳಾಗಿದ್ದಾರೆ. ಅಲ್ಲದೇ ಎತ್ತಂಗಡಿ ಭೀತಿ ಎದುರಿಸುತ್ತಿರುವ ಶಿಕ್ಷಕರು ಸಂಘಗಳಿಗೆ ಮಾನ್ಯತೆ ಇದೆಯೊ ಇಲ್ಲವೊ ಬೆಳಗಾಗುವುದರೊಳಗೆ `ದಿಢಿ ೀರ್ ಪದಾಧಿಕಾರಿ~ಗಳಾಗಿರುವುದು ಕಂಡುಬಂದಿದೆ.

ಸಂಘದ ಪದಾಧಿಕಾರಿಗಳಾಗಿ ವರ್ಗಾವಣೆ ಅಥವಾ ಹೆಚ್ಚುವರಿಯಿಂದಾಗಿ ಸ್ಥಳಾಂತರಗೊಳ್ಳುವ ಪ್ರಮೇಯ ಬಂದರೆ ಒಟ್ಟಾರೆ ಸೇವಾ ಅವಧಿಯಲ್ಲಿ ಎರಡು ಅವಧಿಗೆ ಮಾತ್ರ ಅವರಿಗೆ ಈ ಪ್ರಕ್ರಿಯೆಯಿಂದ ವಿನಾಯಿತಿ ಸೀಮಿತವಾಗಿರುತ್ತದೆ ಎಂಬುದು ವಿಶೇಷ. ಆದರೆ ಈಗಾಗಲೇ ಅನೇಕ ಬಾರಿ ಈ ವಿನಾಯಿತಿ ಪಡೆದವರು ಮತ್ತೆ ವಿನಾಯಿತಿ ಕೋರಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಅಲ್ಲದೇ ಹೆಚ್ಚುವರಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಕೆಲ ಶಿಕ್ಷಕರು ಅಧಿಕಾರಸ್ಥ ರಾಜಕಾರಣಿಗಳ ಪಕ್ಕಾ ಹಿಂಬಾಲಕರಾಗಿರುವುದರಿಂದ ಅವರನ್ನು ಇದ್ದಲ್ಲೇ ಉಳಿಸುವ ನಿಟ್ಟಿನಲ್ಲಿ ಕೆಲ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಅಲ್ಲದೇ ತಾವು ಹೆಚ್ಚುವರಿ ಶಿಕ್ಷಕ ಹುದ್ದೆಗಳಲ್ಲಿರುವುದನ್ನು ಮೊದಲೇ ಗುರುತಿಸಿಕೊಂಡ ಅನೇಕ `ಜಾಣ~ ಶಿಕ್ಷಕರು ಈಗಾಗಲೇ ಪರಸ್ಪರ ಕೋರಿಕೆ ಮೇರೆಗೆ ವರ್ಗಾವಣೆ ಹೊಂದಿದ್ದು ಅವರ ನಂತರದ ಸೇವಾ ಜೇಷ್ಟತೆ ಹೊಂದಿದವರು ಹೆಚ್ಚುವರಿ ಪಟ್ಟಿಯಲ್ಲಿ ಬಂದು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.