ADVERTISEMENT

ಪತ್ನಿಯಿಂದ ಪತಿ ಕೊಲೆ: ಮೊಬೈಲ್ ತಿಳಿಸಿದ ಕೊಲೆ ರಹಸ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 10:45 IST
Last Updated 1 ಜುಲೈ 2012, 10:45 IST

ಕಾರಟಗಿ: ಪ್ರಿಯಕರನ ಪ್ರೇಮಪಾಶದಲ್ಲಿಯೇ ಮುಂದುವರೆಯಬೇಕೆಂಬ ದುರಾಸೆಯಿಂದ ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿ, ಮೂವರನ್ನು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್ 15ರಂದು ಗೂಡೂರ ಸೀಮಾದ ತುಂಗಭದ್ರಾ ಎಡದಂಡೆ ಮುಖ್ಯನಾಲೆಯಲ್ಲಿ ಇಲ್ಲಿಯ ಗೊಬ್ಬರದ ಅಂಗಡಿಯ ಗುಮಾಸ್ತನಾಗಿದ್ದ ನಾಗನಕಲ್ ಗ್ರಾಮದ ಲಿಂಗಾರೆಡ್ಡಿ ಅಲಿಯಾಸ್ ಲಿಂಗರಾಜ್ ಕಡಬೂರ (26) ಎಂಬ ಯುವಕನನ್ನು ಕೊಲೆ ಮಾಡಿ, ದ್ವಿಚಕ್ರ ವಾಹನ ಸಹಿತ ಮೃತದೇಹವನ್ನು ಎಸೆಯಲಾಗಿತ್ತು. ಯಾವುದೇ ಸುಳಿವು, ಸಾಕ್ಷಿ ಇಲ್ಲದಂತೆ ಆರೋಪಿಗಳು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದರು.

ಮೃತನ ಸಹೋದರ ಅಮರೇಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಪ್ಪಳ ಎಸ್.ಪಿ ಬಿ. ಎಸ್. ಪ್ರಕಾಶ್, ಗಂಗಾವತಿ ಡಿವೈಎಸ್ಪಿ ಡಿ. ಎಲ್. ಹಣಗಿ ಮಾರ್ಗದರ್ಶನದಲ್ಲಿ ಗಂಗಾವತಿ ಗ್ರಾಮೀಣ ಸಿಪಿಐ ಆರ್. ಎಸ್. ಉಜ್ಜಿನಿಕೊಪ್ಪ, ಪಿಎಸ್‌ಐ ಡಿ. ದುರುಗಪ್ಪ ನೇತೃತ್ವದಲ್ಲಿ ನುರಿತ ಪೊಲೀಸರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

 15 ದಿನದಲ್ಲಿ ಪ್ರಕರಣ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿವೈಎಸ್ಪಿ ಹಣಗಿ ಶನಿವಾರ ಪೊಲೀಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮನೆಯವರ ಚಲನವಲನ ಮೊದಲಾದ ವಿವರ ಸಂಗ್ರಹಿಸಿದಾಗ ಮೃತನ ಸಹೋದರಿ ಬಸಮ್ಮ ನೀಡಿದ ಸುಳಿವಿನ ಜಾಡು ಹಿಡಿದು ತನಿಖೆ ನಡೆಸಿದಾಗ, ಮೃತನ ಪತ್ನಿ ಬಸವರಾಜ್‌ನ ಜೊತೆ ಅನೈತಿಕ ಸಂಬಂಧ ಹೊಂದಿರುವುದು, ಬಸವರಾಜ್ ಆಗಾಗ ನಾಗನಕಲ್‌ಗೆ ಬರುವ, ಮೊಬೈಲ್‌ನಲ್ಲಿ ಹರಟುವ ವಿಷಯ ಬಯಲಾಯಿತು. ತನಿಖೆ ಚುರುಕುಗೊಳಿಸಿದಾಗ ಗುಂಜಳ್ಳಿಗೆ ಲಿಂಗರಾಜ್ ಬರುವ ವಿಷಯ ತಿಳಿದು, ಬಸವಣ್ಣಕ್ಯಾಂಪ್ ಬಳಿ ಆತನನ್ನು ನೂಲಿನ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಚೀಲದಲ್ಲಿ ಮೃತದೇಹವನ್ನು ಬೈಕ್‌ನಲ್ಲಿ ತಂದು ಎಸೆದಿರುವುದು, ಜೊತೆಗೆ ಉಮೇಶ್ ಸಹಾಯ ಮಾಡಿರುವುದನ್ನು ಆರೋಪಿ ಬಸವರಾಜ್ ಒಪ್ಪಿಕೊಂಡಿದ್ದಾನೆ ಎಂದು ಡಿವೈಎಸ್ಪಿ ತಿಳಿಸಿದರು.

ಶನಿವಾರ ಮೃತನ ಪತ್ನಿ ಶ್ರೀದೇವಿ ಅಲಿಯಾಸ್ ಕುಸುಮಾ,  ಪ್ರಿಯಕರ ಬಸವರಾಜ್, ಸಹಾಯ ಮಾಡಿದ ಉಮೇಶ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದವರು                 ಹೇಳಿದರು.  ತನಿಖೆಯಲ್ಲಿ ಎಎಸ್‌ಐ ದೇಸಾಯಿ ಸಿಬ್ಬದಿಗಳಾದ ಶಂಕರಗೌಡ, ಶರಣಪ್ಪ ಸಿದ್ರಾಂಪೂರ, ವಸಂತ, ಮಹೇಶ್, ಬೋರಣ್ಣವರ್, ವೆಂಕಾರೆಡ್ಡಿ, ಮಲ್ಲಪ್ಪ, ಕಿಶೋರ, ಈರಪ್ಪ, ಚಂದ್ರಶೇಖರ್, ವೆಂಕಟೇಶ್ ಮಹತ್ವದ ಪಾತ್ರ ವಹಿಸಿದ್ದರು ಎಂದರು. ಸಿಪಿಐ ಆರ್.ಎಸ್.ಉಜ್ಜಿನಿಕೊಪ್ಪ, ಪಿಎಸ್‌ಐ ಡಿ. ದುರುಗಪ್ಪ, ಎಸ್‌ಐ ದೇಸಾಯಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.