ADVERTISEMENT

ಪಾಳು ಬಿದ್ದ ಸರ್ಕಾರಿ ವಸತಿ ಗೃಹಗಳು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:59 IST
Last Updated 18 ಜುಲೈ 2017, 5:59 IST

ಕನಕಗಿರಿ: ಪಟ್ಟಣದ ಇಂದಿರಾ ಕಾಲೊನಿಯಲ್ಲಿ ನಿರ್ಮಿಸಿರುವ ಕಂದಾಯ ಇಲಾಖೆಯ ಮೂರು ವಸತಿ ಗೃಹಗಳು  ಪಾಳು ಬಿದ್ದಿವೆ. 14 ವರ್ಷಗಳ ಹಿಂದೆ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಜನ ವಸತಿ ಪ್ರದೇಶ ಇಲ್ಲದ ಕಾರಣ ಅಧಿಕಾರಿಗಳು ಅಲ್ಲಿಗೆ ಹೋಗಿಲ್ಲ ಎನ್ನಲಾಗಿದೆ.

ಮೂರು ಭವನಗಳ ನಿರ್ಮಾಣಕ್ಕೆ ಇಲಾಖೆ  ಅಧಿಕಾರಿಗಳು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಮನೆಗಳಿಗೆ ವಿದ್ಯುತ್, ರಸ್ತೆ, ಹೊರಗೋಡೆ, ನೀರಿನ ಸೌಲಭ್ಯ ಕಲ್ಪಿಸಿಲ್ಲ.  ಸುತ್ತಲೂ ಗಿಡಗಂಟೆಗಳು ಬೆಳೆದಿವೆ ಎಂದು ಸ್ಥಳೀಯರು ಹೇಳಿದರು. ವಸತಿಗೃಹಗಳ ಬಾಗಿಲು, ಕಿಟಕಿಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ. ಕೆಲವು ಕಟ್ಟಡಗಳಲ್ಲಿ  ಬಿರುಕು ಕಾಣಿಸಿಕೊಂಡಿದೆ.

ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಜಾತಿಗಣತಿ, ಜನ ಗಣತಿ ಹಾಗೂ ಚುನಾವಣೆ ಸಮಯದಲ್ಲಿ  ಹಗಲಿರುಳೆನ್ನದೆ  ನಾಡ ಕಚೇರಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ  ಇರುತ್ತದೆ.  ಹೀಗಾಗಿ ಕಚೇರಿ ಸಮೀಪ ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದರೆ  ಅನುಕೂಲವಾಗುತ್ತಿತ್ತು ಎಂದು  ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.ವಸತಿ ಗೃಹಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಅವುಗಳನ್ನು ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.