ಕೊಪ್ಪಳ:ಬಾಬುಜಗಜೀವನ್‌ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರ ಪ್ರತಿಮೆಗಳನ್ನು ನಗರದಲ್ಲಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿದ ದಲಿತ ಮುಖಂಡರು ಈ ಇಬ್ಬರು ನಾಯಕರ ಜಯಂತಿ ಆಚರಣೆ ಕುರಿತು ಚರ್ಚಿಸಲು ಕರೆದ ಸಭೆಯನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದ ಬಳಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ ದಲಿತ ಮುಖಂಡರು, ಜಿಲ್ಲಾಡಳಿತವು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿದರು.
ಈ ಇಬ್ಬರು ಮಹಾನ್‌ನಾಯಕರ ಪುತ್ಥಳಿಗಳು ಸಿದ್ಧಗೊಂಡು 5 ವರ್ಷಗಳೇ ಕಳೆದಿವೆ. ಆದರೂ ಸದರಿ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಇಲ್ಲಸಲ್ಲದ ನೆಪ ಹೇಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಾಬು ಜಗಜೀವನ್‌ರಾಮ್ ಹಾಗೂ ಅಂಬೇಡ್ಕರ್ ಅವರ ಪುತ್ಥಳಿಗಳನ್ನು ಕೂಡಲೇ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕು. ಈ ಇಬ್ಬರು ನಾಯಕ ಜಯಂತಿ ಆಚರಣೆ ಕುರಿತಂತೆ ಚರ್ಚಿಸಲು ಮತ್ತೊಮ್ಮೆ ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದಲಿತರ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಶೇ 22.75ರ ಅನುದಾನವು ಬಳಕೆಯಾಗಿಲ್ಲ. ಇದರಿಂದ ದಲಿತ ಸಮುದಾಯಕ್ಕೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ ಎಂದೂ ದೂರಿದರು.
ಮುಖಂಡರಾದ ಡಾ.ಜ್ಞಾನ ಸುಂದರ, ಸಿದ್ದಪ್ಪ ಹೊಸಮನಿ, ಸಿದ್ದೇಶ ಪೂಜಾರ, ಆನಂದ ಭಂಡಾರಿ, ಹಾಲೇಶ ಕಂದಾರಿ, ಕಾಶೆಪ್ಪ ಅಳ್ಳಳ್ಳಿ, ಯಲ್ಲಪ್ಪ ಬೆಲ್ಲದ, ಸಿದ್ದಪ್ಪ ಕಿಡದಾಳ, ಶಿವು ಹಟ್ಟಿ, ಪ್ರಭು ಬೋಚನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.