ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗನ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಚಿವ ಶಿವರಾಜ ತಂಗಡಗಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನೀಡಿದ್ದ ಕೊಪ್ಪಳ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಬೆಳಿಗ್ಗೆಯಿಂದ ಜನ ಜೀವನ ಯಥಾಸ್ಥಿತಿಯಿತ್ತು. ಬೆಳಿಗ್ಗೆ 10ರ ವೇಳೆಗೆ ಕೆಲವು ಬಿಜೆಪಿ ಕಾರ್ಯಕರ್ತರು ಆಟೋದಲ್ಲಿ ಧ್ವನಿವರ್ಧಕದ ಮೂಲಕ ಸ್ವಯಂ ಪ್ರೇರಿತ ಬಂದ್ ಆಚರಿಸಬೇಕು ಎಂದು ಮನವಿ ಮಾಡಿದರು. ಆದರೆ, ನಗರದ ಹೃದಯ ಭಾಗವಾದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎಲ್ಲಿಯೂ ಸ್ಪಂದನ ಸಿಗಲಿಲ್ಲ.
ಜವಾಹರ ರಸ್ತೆ ಮಾತ್ರ ಬಂದ್: ಬಂದ್ ಕುರಿತು ಮುನ್ನಾದಿನ ಪ್ರಕಟಣೆ ನೀಡಿದ್ದರಿಂದ ಕೆಲವು ಹೋಟೆಲ್‌ನವರು ಹಾಗೂ ಅಂಗಡಿ ಮುಂಗಟ್ಟುಗಳು ಕೆಲಕಾಲ ಮುಚ್ಚಿದ್ದವು. ನಗರದ ಜವಾಹರ ರಸ್ತೆಯ ಅಂಗಡಿಗಳು ಮುಚ್ಚಿದ್ದವು. ಉಳಿದಂತೆ ಎಲ್ಲವೂ ಯಥಾಸ್ಥಿತಿಯಿತ್ತು. ಬಸ್, ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಲಿಲ್ಲ.
ಬಂದ್ ಕರೆ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಕಾವಲು ಇತ್ತು. ಮೀಸಲು ಪಡೆ ಪೊಲೀಸರು, ಅಧಿಕಾರಿಗಳು ಅಲ್ಲಲ್ಲಿ ಗಸ್ತು ತಿರುಗುತ್ತಿದ್ದರು.
ಒಂದು ವಾರದಿಂದ ನಿತ್ಯ ಪ್ರತಿಭಟನೆ, ರಸ್ತೆತಡೆಯಿಂದ ಅಘೋಷಿತ ಬಂದ್‌ನಂತಹ ವಾತಾವರಣವೇ ಸೃಷ್ಟಿಯಾಗಿತ್ತು. ಗ್ರಾಮೀಣ ಪ್ರದೇಶದ ಜನ ನಗರಕ್ಕೆ ಬರುವುದೂ ಕೆಲದಿನಗಳಿಂದ ಕಡಿಮೆಯಾಗಿದೆ. ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ನಗರದ ವಾಣಿಜ್ಯ ಚಟುವಟಿಕೆಗಳು ಮಂದಗತಿಗಿಳಿದಿವೆ. ಮತ್ತೆ ಬಂದ್ ಮಾಡುವುದು ತಮ್ಮಿಂದ ಅಸಾಧ್ಯ ಎಂದು ನಗರದ ವ್ಯಾಪಾರಿಯೊಬ್ಬರು ಹೇಳಿದರು.
ಸಂಜೆ ವೇಳೆ ಎಲ್ಲ ಅಂಗಡಿ ಮಳಿಗೆಗಳು ತೆರೆದಿದ್ದವು. ಜವಾಹರ ರಸ್ತೆಯಲ್ಲೂ ಸಂಜೆ ವೇಳೆ ಎಂದಿನಂತೆ ವ್ಯಾಪಾರ ಚಟುವಟಿಕೆ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.