ADVERTISEMENT

ಬರಮುಕ್ತ ರಾಜ್ಯವಾಗಿಸಲು ಬದ್ಧ: ಸಿಎಂ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 11:27 IST
Last Updated 21 ಮಾರ್ಚ್ 2018, 11:27 IST

ಯಲಬುರ್ಗಾ: ಕೃಷಿ ಭಾಗ್ಯ ಹಾಗೂ ಕೆರೆ ತುಂಬಿಸುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಬರಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರದ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಂತರ್ಜಲ ಕುಸಿತ ಹಾಗೂ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅಂತರ್ಜಲ ವೃದ್ಧಿಗೆ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಹೆಚ್ಚು ರೈತರು ಇದರ ಪ್ರಯೋಜನ ಪಡೆದುಕೊಂಡು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಸುಮಾರು ₹500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೃಷ್ಣಾ ‘ಬಿ’ ಸ್ಕೀಂ ನೀರಾವರಿ ಯೋಜನೆಗೆ ಹಂತ ಹಂತವಾಗಿ ಅನುದಾನ ನೀಡಿದ್ದು, ಈಗಾಗಲೇ ಅದಕ್ಕಾಗಿ ಸಾವಿರಾರು ಕೋಟಿ ವ್ಯಯ ಮಾಡಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ADVERTISEMENT

ರಾಜ್ಯದಲ್ಲಿ 30 ಲಕ್ಷ ಕುಟುಂಬಗಳಿಗೆ ಅನಿಲಭಾಗ್ಯ ಯೋಜನೆ ಅಡಿ ಸಿಲಿಂಡರ್ ಹಾಗೂ ಅಡುಗೆ ಕಿಟ್‌ಗಳನ್ನು ವಿತರಿಸಲಾಗಿದೆ. 1.20 ಕೋಟಿ ಬಡವರಿಗೆ ಉಚಿತ ಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಆರೋಗ್ಯಭಾಗ್ಯ ಯೋಜನೆ, ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ 1,500 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಕೊಟ್ಟ 165 ಭರವಸೆಗಳಲ್ಲಿ 158 ಈಡೇರಿವೆ. ಉತ್ತಮ ಆಡಳಿತ ನೀಡಿದ್ದರಿಂದ ನಂ.1 ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನುಡಿದರು.

ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರ‍್ಯಾವಣಕಿಯಲ್ಲಿ ಇಂದಿರಾ ವಸತಿ ಶಾಲೆ, ಯಲಬುರ್ಗಾ ಹಾಗೂ ಕುಕನೂರಿನಲ್ಲಿ ಕನಕಭವನ, ಚಿಕ್ಕೊಪ್ಪದಲ್ಲಿ ಪಿಜಿ ಕೇಂದ್ರ ಕಟ್ಟಡ, ತಳಕಲ್ಲ ಪ್ರದೇಶದಲ್ಲಿ ಕೌಶಲ ತರಬೇತಿ ಕೇಂದ್ರ ಹೀಗೆ ವಿವಿಧ ಅಭಿವೃದ್ಧಿ ಕೆಲಸಗಳಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಎಂ.ಎಸ್. ಸುಭಾಸ, ಕನಕಗಿರಿ ಶಾಸಕ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.