ADVERTISEMENT

ಬಿಜಕಲ್ಲ ಗ್ರಾಮ ಪಂಚಾಯಿತಿ: ಕೂಲಿಕಾರರ ಧರಣಿ

‘ನರೇಗಾ’ ಯೋಜನೆ ಅಸಮರ್ಪಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:05 IST
Last Updated 15 ಜೂನ್ 2018, 13:05 IST

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿಸಿಕೊಂಡರೂ ಟ್ರ್ಯಾಕ್ಟರ್‌ ಬಾಡಿಗೆ ಹಣ ಪಾವತಿಸಿಲ್ಲ ಎಂದು ದೂರಿ ತಾಲ್ಲೂಕಿನ ಕೆ.ಬೋದೂರು ಗ್ರಾಮದ ಕೂಲಿಕಾರ್ಮಿಕರು ಮತ್ತು ಟ್ರ್ಯಾಕ್ಟರ್‌ ಮಾಲೀಕರು ಗುರುವಾರ ತಾಲ್ಲೂಕಿನ ಬಿಜಕಲ್ಲ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಮಹಿಳೆಯರು ಸೇರಿದಂತೆ ಖಾಲಿ ಬುಟ್ಟಿ, ಸಲಿಕೆಯೊಂದಿಗೆ ಪಂಚಾಯಿತಿ ಕಚೇರಿಗೆ ಬಂದು ಧರಣಿ ಕುಳಿತರು. ಬೇಡಿಕೆ ಈಡೇರುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಒಂದು ವರ್ಷದ ಹಿಂದೆ ಹೊಸಳ್ಳಿ ಗ್ರಾಮದ ಬಳಿ ಇರುವ ನೀರಾವರಿ ಕೆರೆಯಲ್ಲಿನ ಹೂಳು ತೆಗೆಯುವುದಕ್ಕೆ ಈ ಪಂಚಾಯಿತಿಯಿಂದ ನೂರಾರು ಕೂಲಿಕಾರರನ್ನು ಟ್ರ್ಯಾಕ್ಟರ್‌ ಮೂಲಕ ಕರೆದೊಯ್ಯುವ ಮತ್ತು ಕೆರೆ ಹೂಳನ್ನು ವಿಲೇವಾರಿ ಮಾಡುವ ಕೆಲಸ ನಿರ್ವಹಿಸಲಾಗಿತ್ತು. ಗ್ರಾಮದ ಐದು ಟ್ರ್ಯಾಕ್ಟರ್‌ಗಳಿಗೆ ತಲಾ ₹ 38,000 ಬಾಡಿಗೆ ಹಣ ನೀಡಬೇಕಿದ್ದು ಇಲ್ಲಿಯವರೆಗೂ ಪಂಚಾಯಿತಿ ಹಣ ಪಾವತಿಸಿಲ್ಲ. ಈ ಬಗ್ಗೆ ಹಲವು ಬಾರಿ ಕೇಳಿದರೂ ಸ್ಪಂದಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.

ADVERTISEMENT

ಅದೇ ರೀತಿ ಹೊಸದಾಗಿ ಜಾಬ್‌ಕಾರ್ಡಗಳನ್ನು ನೀಡುತ್ತಿಲ್ಲ, ಚಾಲ್ತಿಯಲ್ಲಿರುವ ಕಾರ್ಡ್ ಗಳನ್ನು ದುರುದ್ದೇಶದಿಂದ ರದ್ದುಪಡಿಸಲಾಗುತ್ತಿದೆ. ಸಮರ್ಪಕ ರೀತಿಯಲ್ಲಿ ನೋಂದಾಯಿತ ಕೂಲಿಕಾರರಿಗೆ ಕೆಲಸ ಕೊಡುವುದಿಲ್ಲ. ಕೆಲಸ ಮಾಡಿದರೂ ಸಕಾಲದಲ್ಲಿ ಹಣ ಪಾವತಿಸುವುದಿಲ್ಲ. ಯೋಜನೆ ಅನುಷ್ಠಾನದಲ್ಲಿ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಧರಣಿ ನಿರತರನ್ನು ಭೇಟಿ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಮಾಲಸಾಬ್‌ ತಾಂತ್ರಿಕ ತೊಂದರೆಯಿಂದ ಬಾಡಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ, ಶೀಘ್ರದಲ್ಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಮತ್ತು ನರೇಗಾ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವ ಭರವಸೆ ನೀಡಿದ ನಂತರ ಜನರು ಧರಣಿ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.