ADVERTISEMENT

ಬಿಜೆಪಿಯಲ್ಲೀಗ ಟಿಕೆಟ್‌ಗಾಗಿ ಹರಕೆ

ಕಾರ್ಯಕರ್ತರಿಂದ ದೇವರಿಗೆ ಈಡುಗಾಯಿ, ದೀಡು ನಮಸ್ಕಾರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 12:06 IST
Last Updated 31 ಮಾರ್ಚ್ 2018, 12:06 IST
ಕೊಪ್ಪಳ ಗವಿಮಠದ ಆವರಣದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ವಿ.ಚಂದ್ರಶೇಖರ್‌ ಅಭಿಮಾನಿಗಳು ಶುಕ್ರವಾರ ದೀಡು ನಮಸ್ಕಾರ ಸಲ್ಲಿಸಿದರು
ಕೊಪ್ಪಳ ಗವಿಮಠದ ಆವರಣದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ವಿ.ಚಂದ್ರಶೇಖರ್‌ ಅಭಿಮಾನಿಗಳು ಶುಕ್ರವಾರ ದೀಡು ನಮಸ್ಕಾರ ಸಲ್ಲಿಸಿದರು   

ಕೊಪ್ಪಳ: ಬಿಜೆಪಿಯಲ್ಲೀಗ ಹರಕೆ ರಾಜಕೀಯ ಶುರುವಾಗಿದೆ. ಕೆಲವು ಆಕಾಂಕ್ಷಿಗಳ ಪರ ಕಾರ್ಯಕರ್ತರು ಹರಕೆ ಮಾರ್ಗಕ್ಕೆ ಹೋಗಿರುವುದು ಪಕ್ಷದ ಜಿಲ್ಲಾಧ್ಯಕ್ಷರ ಸಹಿತ ಹಿರಿಯ ಮುಖಂಡರಿಗೆ ಇರುಸುಮುರುಸು ತಂದಿದೆ.ಕೊಪ್ಪಳ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸಿ.ವಿ.ಚಂದ್ರಶೇಖರ್‌ ಪರ ಕೆಲವು ಕಾರ್ಯಕರ್ತರು ನಗರದ ಹೊರವಲಯದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಈಡುಗಾಯಿ ಒಡೆಸಿದ್ದಾರೆ. ಶುಕ್ರವಾರ ಬಸವೇಶ್ವರ ವೃತ್ತದಿಂದ ಗವಿಮಠದವರೆಗೆ ದೀಡು ನಮಸ್ಕಾರ ಹಾಕಿದ್ದಾರೆ. ಅವರಿಗೆ ಟಿಕೆಟ್‌ ಸಿಗಬೇಕು ಎಂದು ಪ್ರಾರ್ಥಿಸಿದ್ದಾರೆ.ಇನ್ನೊಂದೆಡೆ ಪಕ್ಷದ ಮುಖಂಡರ ಗುಂಪೊಂದು ಜಿಲ್ಲಾಧ್ಯಕ್ಷರು, ಸಂಸದರಿಗೂ ಮಾಹಿತಿ ನೀಡದೆ ಬೆಂಗಳೂರಿನಲ್ಲಿ ಪ್ರಹ್ಲಾದ ಜೋಷಿ ಅವರನ್ನು ಭೇಟಿ ಮಾಡಿದೆ. 'ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನೀಡದಿದ್ದಲ್ಲಿ ಸಿ.ವಿ.ಚಂದ್ರಶೇಖರ್‌ ಅವರಿಗೆ ಕೊಡಬೇಕು' ಎಂದು ಈ ಗುಂಪು ಒತ್ತಾಯಿಸಿದೆ. 'ಪ್ರತಿಸ್ಪರ್ಧಿ ಪಕ್ಷಗಳು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಎಂಬುದನ್ನು ಸ್ಪಷ್ಟಪಡಿಸಿವೆ. ಹೀಗಿರುವಾಗ ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಘೋಷಣೆ ವಿಳಂಬ ಏಕೆ ಎಂಬುದು ಕಾರ್ಯಕರ್ತರ ಪ್ರಶ್ನೆ. ಹೀಗಾಗಿ ಸಹಜವಾಗಿ ಅವರು ಕೇಳಿರಬಹುದು' ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಹೇಳಿದರು.

ಕಾರ್ಯಕರ್ತರು ಹರಕೆ ಮೊರೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಸಿಂಗನಾಳ, 'ಕಾರ್ಯಕರ್ತರು ಹೀಗೆ ಮಾಡುವುದರಿಂದ ತಪ್ಪು ಸಂದೇಶ ಹೋಗುತ್ತದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಕೊಪ್ಪಳ, ಗಂಗಾವತಿಯಲ್ಲಿ ಹಲವಾರು ಜನ ಪ್ರಭಾವಿ ನಾಯಕರೇ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೇ ಟಿಕೆಟ್‌ ಘೋಷಣೆ ಆದರೂ ಅವರ ಪರ ಕೆಲಸ ಮಾಡಬೇಕು. ಈ ರೀತಿ ಹರಕೆಗಳು ಅವರವರ ಮನದಲ್ಲಿ ಇರಬೇಕೇ ವಿನಃ ಬಹಿರಂಗವಾಗಿ ತೋರಿಸಿಕೊಳ್ಳುವುದು ಸರಿಯಲ್ಲ' ಎಂದು ಹೇಳಿದರು.'ನಾವು ಬಿಜೆಪಿಯ ತಳಮಟ್ಟದ ಕಾರ್ಯಕರ್ತರು. ಜಿಲ್ಲೆಯಲ್ಲಿ ಹೊಸ ಮುಖ ಬರಲಿ ಎಂಬುದು ನಮ್ಮ ಆಶಯ. ಅದಕ್ಕಾಗಿ ಸಿವಿಸಿ ಪರ ದೀಡು ನಮಸ್ಕಾರ ಹಾಕಿದ್ದೇವೆ' ಎಂದು ಅಭಿಮಾನಿ ಜ್ಯೋತಿ ಬಸವರಾಜು ಹೇಳಿದರು. ತಿಪ್ಪಣ್ಣ ಗುದ್ಲಿ, ಈರಣ್ಣ ರಡ್ಡಿ, ಮಾರುತಿ ಆಪ್ಟೆ ದೀಡು ನಮಸ್ಕಾರ ಹಾಕಿದವರು.'ಗಂಗಾವತಿಯಲ್ಲಿ ನಾನೂ ಸೇರಿದಂತೆ ಐದು ಮಂದಿ ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಯಾರೂ ಹರಕೆ ಮೊರೆ ಹೋಗಿಲ್ಲ. ಒಟ್ಟಾರೆ ಪಕ್ಷವನ್ನು ಗೆಲ್ಲಿಸುವುದೇ ಮುಖ್ಯ ಗುರಿ' ಎಂದು ಸಿಂಗನಾಳ ಹೇಳಿದರು.

'ಪಕ್ಷದ ವರಿಷ್ಟರು ನನ್ನ ಮೇಲೆ ಒಳ್ಳೆಯ ಭಾವನೆ ಇಟ್ಟಿದ್ದಾರೆ. ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಪರೋಕ್ಷವಾಗಿ ಒಲವನ್ನೂ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ನಾನು ಸ್ಪರ್ಧಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಒಳ್ಳೆಯ ಭಾವನೆಯಿಂದ ಕಾರ್ಯಕರ್ತರು ದೀಡು ನಮಸ್ಕಾರ ಹಾಕಿದ್ದಾರೆ. ಇದರಿಂದ ಯಾರಿಗೂ ತಪ್ಪು ಸಂದೇಶ ಹೋಗುವುದಿಲ್ಲ' ಎಂದು ಸಿ.ವಿ.ಚಂದ್ರಶೇಖರ್‌ ಸ್ಪಷ್ಟಪಡಿಸಿದರು.'ಸಂಸದ ಸಂಗಣ್ಣ ಕರಡಿ ಅವರು ಆಕಾಂಕ್ಷಿಯಾಗಿದ್ದು ಸ್ಪರ್ಧಿಸುವುದರಲ್ಲಿ ತಪ್ಪಿಲ್ಲ. ಅವರಿಗೇ ಟಿಕೆಟ್‌ ಸಿಗಬೇಕು ಎಂದು ಆಶಿಸುತ್ತೇನೆ. ಆದರೆ, ಅವರು ಹಾಲಿ ಸಂಸದರಾಗಿರುವುದರಿಂದ ಅವರಿಗೆ ಟಿಕೆಟ್‌ ಕೊಡುವ ಸಾಧ್ಯತೆ ಕಡಿಮೆ. ಆದ್ದರಿಂದ ವರಿಷ್ಠರು ನನ್ನ ಪರ ಒಲವು ವ್ಯಕ್ತಪಡಿಸಿದ್ದಾರೆ' ಎಂದು ಚಂದ್ರಶೇಖರ್‌ ಹೇಳಿದರು.

ADVERTISEMENT

ದೀಡು ನಮಸ್ಕಾರ, ಈಡುಗಾಯಿ ಹರಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, 'ನಮಗೆ ದೇವರ ಆಶೀರ್ವಾದ ಇದೆ. ಇಂಥ ಹರಕೆ ಸಲ್ಲಿಸುವ ಸಂದರ್ಭವೇ ಬರುವುದಿಲ್ಲ' ಎಂದರು.

**

ಪಕ್ಷದ ವರಿಷ್ಟರು ನನ್ನ ಮೇಲೆ ಒಳ್ಳೆಯ ಭಾವನೆ ಇಟ್ಟಿದ್ದಾರೆ. ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಒಲವಿದೆ. ಇದರಿಂದ ತಪ್ಪು ಸಂದೇಶ ಹೋಗುವುದಿಲ್ಲ – ಸಿ.ವಿ.ಚಂದ್ರಶೇಖರ್‌,ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.