ADVERTISEMENT

ಬೆಳೆಗಳಿಗ ಸೈನಿಕ ಹುಳು ಕೀಟಬಾಧೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 7:45 IST
Last Updated 11 ಅಕ್ಟೋಬರ್ 2017, 7:45 IST
ಹನುಮಸಾಗರ ಸಮೀಪದ ಬಿಳೇಕಲ್ ಗ್ರಾಮದಲ್ಲಿ ಸೋಮವಾರ ನಡೆದ ಸೈನಿಕ ಹುಳು ರೈತ ಜಾಗೃತಿ ಅಬಿಯಾನದಲ್ಲಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ರೈತರಿಗೆ ಮಾಹಿತಿ ನೀಡಿದರು
ಹನುಮಸಾಗರ ಸಮೀಪದ ಬಿಳೇಕಲ್ ಗ್ರಾಮದಲ್ಲಿ ಸೋಮವಾರ ನಡೆದ ಸೈನಿಕ ಹುಳು ರೈತ ಜಾಗೃತಿ ಅಬಿಯಾನದಲ್ಲಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ರೈತರಿಗೆ ಮಾಹಿತಿ ನೀಡಿದರು   

ಹನುಮಸಾಗರ: ಮೆಕ್ಕೆಜೋಳ, ರಾಗಿ, ನವಣೆ, ಜೋಳ ಹಾಗೂ ಶೇಂಗಾ ಬೆಳೆಗ ಸೈನಿಕ ಹುಳು ಕೀಟಬಾಧೆ ತಗುಲಿದ್ದು, ರೈತರು ಆತಂಕಗೊಂಡಿದ್ದಾರೆ. ಈ ಬಗ್ಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಅವರು ಹನುಮನಾಳ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಬಿಳೇಕಲ್, ಹನುಮನಾಳ, ನಿಲೋಗಲ್, ಜಹಗೀರಗುಡದೂರ ಸೇರಿದಂತೆ ತಾಲ್ಲೂಕುನ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ  ರೈತರಿಗೆ ಮಾಹಿತಿ ನೀಡಿದರು.

ಸೈನಿಕ ಹುಳು ಸಣ್ಣಗೆ ನಯವಾದ ಕಳೆಗುಂದಿದ ಹಸಿರು ಬಣ್ಣದಿಂದ ಕೂಡಿದ್ದು, ಮೈಮೇಲೆ ಅಡ್ಡ ಗೆರೆಗಳಿರುತ್ತವೆ. ಸುಮಾರು 1.5 ಇಂಚು ಉದ್ದವಿರುತ್ತದೆ. ಒಂದು ಹೆಣ್ಣು ಪತಂಗವು 800 ರಿಂದ 1,000 ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತದೆ. 12ರಿಂದ 15 ದಿನಗಳಲ್ಲಿ ಕೋಶಾವಸ್ಥೆಗೆ ಹೋಗುತ್ತದೆ.   5 ರಿಂದ 7 ದಿನದೊಳಗೆ ಕೋಶಾವಸ್ಥೆಯಿಂದ ಪತಂಗಗಳು ಹೊರಬಂದು ತಮ್ಮ ಸಂತತಿಯನ್ನು ಬೆಳೆಸುತ್ತವೆ ಎಂದು ಹೇಳಿದರು.

ತಾಲ್ಲೂಕಿನ ಕೆಲ ಭಾಗಗಳಲ್ಲಿ ಹುಳುವಿನ ಬಾಧೆ ತೀವ್ರವಾಗಿದ್ದು, ಒಂದು ಗಿಡದಲ್ಲಿ ಸುಮಾರು 15-20 ಹುಳುಗಳು ಕಂಡು ಬಂದಿವೆ. ಹಗಲು ವೇಳೆ ಗರಿಗಳ ಬುಡದಲ್ಲಿ ಮತ್ತು ಮಣ್ಣಿನಲ್ಲಿ ಅಡಗಿಕೊಂಡಿದ್ದು, ರಾತ್ರಿ ವೇಳೆ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ.  ಸೈನಿಕ ಹುಳುವಿನ ಹತೋಟಿಗಾಗಿ ಕ್ಲೋರೋಪರಿಪಾಸ್ 20 ಇ.ಸಿಯನ್ನು 2 ಮಿ.ಲೀ ಅಥವಾ ಕ್ವಿನಾಲ್ ಫಾಸ್ 25 ಇ.ಸಿಯನ್ನು 2 ಮಿ.ಲೀ ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ಪ್ರದೀಪ ಬಿರಾದಾರ ಮಾಹಿತಿ ನೀಡಿ, ಮರಿ ಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿ ಇರುವಾಗ ಸಿಂಪಡಣಾ ಕ್ರಮವನ್ನು ಅನುಸರಿಸಿದರೆ ಪರಿಣಾಮಕಾರಿಯಾಗಿ ಹುಳುಗಳನ್ನು ಹತೋಟಿ ಮಾಡಬಹುದು ಎಂದರು.

ಒಂದು ಎಕರೆಗೆ ದ್ರಾವಣ ತಯಾರಿಸಲು 20 ಕೆ.ಜಿ ಭತ್ತದ ತೌಡಿನೊಂದಿಗೆ 2 ಕೆ.ಜಿ ಬೆಲ್ಲವನ್ನು ಕುಟ್ಟಿ ಪುಡಿ ಮಾಡಬೇಕು. ಅದಕ್ಕೆ 4 ಲೀ ನೀರು ಬೆರೆಸಿ ಚೀಲ ಅಥವಾ ಡ್ರಮ್ಮಿನಲ್ಲಿ ರಾತ್ರಿಯಿಡಿ ಕೊಳೆಯಲು ಬಿಡಬೇಕು.

ಮಾರನೆಯ ದಿನ 250 ಮಿ.ಲೀ ಮೊನೋಕ್ರೋಟೋಫಾಸ್ 36 ಮಿ.ಲೀ ಮತ್ತು ಡಿಡಿವಿಪಿ ಅಥವಾ ನುವಾನ್ 100 ಮಿ.ಲೀ. ಮಿಶ್ರಣ ಮಾಡಿ ಸಂಜೆ ವೇಳೆಯಲ್ಲಿ ಹೊಲದಲ್ಲಿ  ಬೆಳೆಗಳಿಗೆ ಎರಚಬೇಕು.

ಬೆಳೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಹುಳುಗಳನ್ನು ಆಕರ್ಷಣೆ ಮಾಡಬಹುದು. ಮೇಲಿನ ಹತೋಟಿ ಕ್ರಮಗಳನ್ನು ರೈತರು ತ್ವರಿತವಾಗಿ ಹಾಗೂ ಸಾಮೂಹಿಕವಾಗಿ ಕೈಗೊಂಡರೆ ಸೈನಿಕ ಹುಳುವಿನ ನಿರ್ವಹಣೆ ಸಾಧ್ಯ ಎಂದು ಹೇಳಿದರು.

ಕೃಷಿ ಅಧಿಕಾರಿ ಶಿವಾನಂದ ಮಾಳಗಿ ಮಾಹಿತಿ ನೀಡಿ, ಹೊಲದ ಸುತ್ತಲೂ ಬದು ನಿರ್ಮಿಸಿ, ಅದರಲ್ಲಿ ಫೆನ್ವೆಲರೇಟ್ ಅಥವಾ ಮೆಲಾಥಿಯನ್ ಪುಡಿ ಹಾಕಿ ಕೀಟವು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗುವುದನ್ನು ತಪ್ಪಿಸಬಹದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.