ಕೊಪ್ಪಳ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡು ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಪ್ರೋತ್ಸಾಹಧನ ಪಡೆದುಕೊಳ್ಳಲು ಈಗ ಯಾರೂ ಮುಂದೆ ಬರುತ್ತಿಲ್ಲ.
ಸರ್ಕಾರ ನೀಡುವ ಪ್ರೋತ್ಸಾಹಧನ ನಿರಾಕರಿಸಿ ಉದಾರತೆ ಇಲ್ಲವೇ ಸ್ವಾಭಿಮಾನ ಮೆರೆಯಲಾಗುತ್ತಿದೆ ಎಂಬ ಊಹೆ ನಿಮ್ಮದಾಗಿದ್ದರೆ ಅದು ತಪ್ಪು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಇನ್ನು ಮುಂದೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂಬುದಾಗಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಹೇಳಿಕೆಯೇ ಜನರ ಈ ನಿಲುವಿಗೆ ಕಾರಣ.
ಹೀಗಾಗಿ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದರೂ ವಿವರಗಳನ್ನು ಸಲ್ಲಿಸಿ ಪ್ರೋತ್ಸಾಹಧನ ಪಡೆಯಲು ಜನರು ಮುಂದೆ ಬರುತ್ತಿಲ್ಲ ಎಂದು ಸಂಪೂರ್ಣ ಸ್ವಚ್ಛತಾ ಆಂದೋಲನದ ಅಧಿಕಾರಿಗಳು ಹೇಳುತ್ತಾರೆ.
ಈಗ ವಿವರಗಳನ್ನು ಸಲ್ಲಿಸಿದರೆ, ಕೇವಲ 3,700 ರೂಪಾಯಿ ಪ್ರೋತ್ಸಾಹಧನ ಸಿಗುತ್ತದೆ. ಆದರೆ, 10 ಸಾವಿರ ರೂಪಾಯಿ ಪ್ರೋತ್ಸಾಹಧನವನ್ನು ಎಂದಿನಿಂದ ನೀಡಲಾಗುತ್ತದೆಯೋ ಆಗಷ್ಟೇ ಶೌಚಾಲಯ ನಿರ್ಮಿಸಿಕೊಂಡಿರುವ ಕುರಿತು ವಿವರಗಳನ್ನು ಸಲ್ಲಿಸುವುದಾಗಿ ಜನರು ಹೇಳುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇದೇ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
`10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿರುವುದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಆದೇಶ ಬಂದಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ 3,700 ರೂಪಾಯಿ ಪ್ರೋತ್ಸಾಹಧನವನ್ನು ಮಾತ್ರ ವಿತರಿಸಲಾಗುತ್ತಿದೆ~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಸ್ಪಷ್ಟಪಡಿಸುತ್ತಾರೆ.
ಈಗಲೂ ಹಲವಾರು ಗ್ರಾಮಗಳ ಜನರು ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದು `10 ಸಾವಿರ ಕೊಡಂಗಿದ್ರ ಮಾಹಿತಿ ನೀಡ್ತೀವ್ರಿ. ಯಾವಾಗ್‌ನಿಂದ ಕೊಡ್ತೀರೀ~ ಎಂದು ವಿಚಾರಿಸುವುದು ಕಂಡುಬರುತ್ತಿದೆ.
ಈ ಮೊದಲು ತಮ್ಮ ಮನೆ ಪರಿಸರದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರೋತ್ಸಾಹಧನಕ್ಕಾಗಿ ಕೆಲವು ಜನರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ದುಂಬಾಲು ಬೀಳುತ್ತಿದ್ದರು ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.
ಅನುದಾನ ಇನ್ನೂ ಬಂದಿಲ್ಲ. ಬಂದ ನಂತರ ಪ್ರೋತ್ಸಾಹಧನ ನೀಡಲಾಗುವುದು ಎಂಬ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಮಜಾಯಿಷಿಯನ್ನು ಜನರು ಒಪ್ಪುತ್ತಿರಲಿಲ್ಲ. ಸದ್ಯ ನೀವೇ ನಿಮ್ಮ ಕೈಯಿಂದ ಹಣ ಕೊಟ್ಟು ಬಿಡಿ, ಅನುದಾನ ಬಂದ ನಂತರ ಆ ಹಣವನ್ನು ನೀವೇ ತೆಗೆದುಕೊಳ್ಳಿ ಎಂದು ಪಟ್ಟು ಹಿಡಿಯುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ, 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವ ಕುರಿತು ಸಚಿವರ ಹೇಳಿಕೆ ಕೇಳಿದಾಗಿನಿಂದ ಶೌಚಾಲಯ ನಿರ್ಮಿಸಿಕೊಂಡ ಬಗ್ಗೆ ವಿವರಗಳನ್ನು ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
2005-06ನೇ ಸಾಲಿನಿಂದ ಜಾರಿಗೆ ಬಂದಿರುವ ಸಂಪೂರ್ಣ ಸ್ವಚ್ಛತಾ ಆಂದೋಲನ 2016-17ನೇ ಸಾಲಿಗೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿರುವ 134 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 2,38,487 ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.
ಈ ಪೈಕಿ ಎಪಿಎಲ್ ಮನೆಗಳ ಸಂಖ್ಯೆ 1,77,618 ಇದ್ದು 2012ರ ಜೂನ್‌ಗೆ ಅಂತ್ಯಗೊಂಡ ಅವಧಿಯಲ್ಲಿ 94,129 ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 60,869 ಬಿಪಿಎಲ್ ಮನೆಗಳಿದ್ದು, ಈ ಪೈಕಿ ಇದೇ ಅವಧಿಯಲ್ಲಿ 52,915 ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.