ADVERTISEMENT

`ಮಠಾಧೀಶರಿಂದ ನೀತಿಸಂಹಿತೆ ಉಲ್ಲಂಘನೆ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:24 IST
Last Updated 26 ಏಪ್ರಿಲ್ 2013, 6:24 IST

ಕುಷ್ಟಗಿ: ಇಲ್ಲಿಯ ಸುಪ್ರಿಯಾ ಲಾಡ್ಜ್‌ನಲ್ಲಿ ಮಂಗಳವಾರ ರಾತ್ರಿ ತಂಗಿ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಮೂವರು ಮಠಾಧೀಶರಿಗೆ ನೋಟಿಸ್ ಜಾರಿ ಮಾಡಿರುವ ಇಲ್ಲಿಯ ಚುನಾವಣಾಧಿಕಾರಿ, ಮೂರುದಿನಗಳ ಒಳಗೆ ಉತ್ತರಿಸದಿದ್ದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಧಾರ ಮೇಲೆ ನಿಮ್ಮ ಮೇಲೆ ಕ್ರಮ ಕ್ರಮ ಕೈಗೊಳ್ಳುವುದಾಗಿ ಅದರಲ್ಲಿ ಎಚ್ಚರಿಸಿದ್ದಾರೆ.

ಗುರುವಾರ ಪ್ರಕಟಗೊಂಡಿರುವ ಈ ಕುರಿತ `ಪ್ರಜಾವಾಣಿ' ವರದಿ ಕ್ಷೇತ್ರದಲ್ಲಿ ಸಂಚಲ ಮೂಡಿಸಿದ್ದು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿನ ತೀವ್ರ ಚರ್ಚೆಗೆ ಕಾರಣವಾಗಿದೆ. ತಕ್ಷಣ ಎಚ್ಚೆತ್ತುಕೊಂಡಿರುವ ತ್ರಿಶ್ರೀಗಳು ಅಧಿಕೃತ ನೋಟಿಸ್ ಬರುವ ಮೊದಲೇ ಚುನಾವಣಾಧಿಕಾರಿಗೆ ಲಿಖಿತ ಉತ್ತರ ನೀಡಿರುವುದು ಅಚ್ಚರಿ ಮೂಡಿಸಿದೆ.

ಚುನಾವಣಾಧಿಕಾರಿ ಎಂ. ಸುಜ್ಞಾನಮೂರ್ತಿ ಪಟ್ಟಣದ ಮದ್ದಾನಿ ಹಿರೇಮಠದ ಮದ್ದಾನೇಶ್ವರ ಸ್ವಾಮೀಜಿ, ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ ಹಾಗೂ ಯಲಬುರ್ಗಾ ತಾಲ್ಲೂಕು ಮಂಗಳೂರು ಗ್ರಾಮದ ಸಿದ್ದಲಿಂಗ ಸ್ವಾಮೀಜಿ ಈ ಮೂವರಿಗೂ ಏ.25ರಂದು ನೋಟಿಸ್ ಕಾರಣ ಕೇಳಿ ನೀಡಿರುವ ನೋಟಿಸ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿ ಸಿರುವ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ, ಸ್ವಾಮೀಜಿಗಳಿಗೆ ನೋಟಿಸ್ ನೀಡಿದ್ದೇವೆ, ಆದರೆ ನೋಟಿಸ್ ಜಾರಿಗೊಳ್ಳವ ಮೊದಲೇ ಸ್ವಾಮೀಜಿಗಳು ಸಮಜಾಯಿಷಿ ನೀಡಿದ್ದು ಭಕ್ತರನ್ನು ಆಶೀರ್ವದಿಸಲು ಹೋಗಿದ್ದೆವು, ರಾಜಕೀಯ ವಿಷಯ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ವಿವರಿಸಿದರು.

ನೋಟಿಸಲ್ಲಿ ಹೀಗಿದೆ: ಏ.23ರ ರಾತ್ರಿ 9.30ರ ವೇಳೆ ಲಾಡ್ಜ್‌ನ 1ನೇ ಸಂಖ್ಯೆ ಕೋಣೆಯಲ್ಲಿದ್ದ ನೀವು ಇದ್ದಾಗ ಅಲ್ಲಿಗೆ ಬಂದ ಬಿಎಸ್‌ಆರ್‌ಸಿ ಅಭ್ಯರ್ಥಿ ಸಹೋದರ ನಾಗರಾಜಗೌಡ ಗೋನಾಳ ನಿಮ್ಮ ಜೊತೆ ಚುನಾವಣಾ ವಿಷಯ ಚರ್ಚಿಸಿರುವುದು ತಿಳಿದಿದೆ.

ಮಠಾಧೀಶರಾದ ತಾವು ರಾಜಕೀಯ ಹಸ್ತಕ್ಷೇಪ ಮಾಡಿದ್ದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿ ಬರುತ್ತದೆ ಎನ್ನಲಾಗಿದೆ.
ಗೋನಾಳಗೆ ಎಚ್ಚರಿಕೆ: ಅಲ್ಲದೇ ಲಾಡ್ಜ್‌ನಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ನಾಗರಾಜಗೌಡ ಗೋನಾಳ ಅವರಿಗೂ ನೋಟಿಸ್ ನೀಡಿರುವ ಚುನಾವಣಾಧಿಕಾರಿ `ಅಭ್ಯರ್ಥಿ ಸಹೋದರನಾದ ನೀವು ಮಠಾಧೀಶರೊಂದಿಗೆ ಚುನಾವಣಾ ವಿಷಯ ಚರ್ಚಿಸಿದ್ದು ತಿಳಿದುಬಂದಿದೆ. ರಾಜಕೀಯ ಧಾರ್ಮೀಕರಣದಲ್ಲಿ ನಿರತರಾಗಿದ್ದೀರಿ, ಈ ಬಗ್ಗೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಮೂರು ದಿನಗಳಲ್ಲಿ ಉತ್ತರಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.