ADVERTISEMENT

ಮಲಿನ ನೀರು ಸಂಗ್ರಹ: ಭೀತಿಯಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 4 ಮೇ 2015, 10:57 IST
Last Updated 4 ಮೇ 2015, 10:57 IST

ಕಾರಟಗಿ: ಮೂರ‌್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಸುಧಾರಿತ ಪ್ರದೇಶ ಎಂಬ ಹೆಗ್ಗಳಿಕೆಯ 11ನೇ ವಾರ್ಡ್‌ನ ಜೆಪಿ ನಗರದ ಕೆಲ ಭಾಗದಲ್ಲಿ ಚರಂಡಿಯ ಮಲೀನ ನೀರು ಸಂಗ್ರಹಗೊಳ್ಳುತ್ತಿದೆ. ರೋಗದ ಭೀತಿಯಲ್ಲಿ ಜನರು ಇದ್ದು, ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಅಲ್ಲಿಯ ನಾಗರಿಕರು ಒತ್ತಾಯಿಸಿದ್ದಾರೆ.

ಶ್ರೀದೇವಿ ದೇವಾಲಯದ ಹಿಂದಿನ ಭಾಗದ ತಗ್ಗುಪ್ರದೇಶಕ್ಕೆ ವಾರ್ಡ್‌ನ ನಿರ್ವಹಣೆಯೆ ಇರದ ಎಲ್ಲಾ ಚರಂಡಿ ನೀರು ಸಂಗ್ರಹಗೊಳ್ಳುವುದು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದ್ದ ಚರಂಡಿಗಳ ನಿರ್ವಹಣೆ ಇಲ್ಲ. ಮಳೆಯಾದರೆ ಈ ಭಾಗವೆಲ್ಲಾ ಮಲೀನ ನೀರಿನ ಕೆರೆಯಾಗುತ್ತದೆ.

ಇರುವ ಶಾಲೆಗೆ ಹೋಗಲು ರಸ್ತೆ ಬಂದ್ ಆಗಿದೆ. ಪ್ರಾರ್ಥನೆ ಮಾಡಲು ಸ್ಥಳವಿಲ್ಲದಂತೆ ನೀರು ನಿಂತಿದೆ. ಸಂಬಂಧಿಸಿದವರಿಗೆ ವಿಷಯ ತಿಳಿಸಿದರೂ ಪ್ರಯೋಜನೆಯಾಗುತ್ತಿಲ್ಲ. ಶಾಲಾ ಕಟ್ಟಡ ನಿರ್ಮಾಣವನ್ನು ಇದೇ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸಿ. ಗದ್ದೆಪ್ಪ, ಶಿಕ್ಷಕ ಆರ್. ಎಸ್. ಹಂಚಿನಾಳ ಗುರುವಾರ ದೂರಿದರು.

ಮಲೀನ ನೀರು ಸಂಗ್ರಹಣೆಯಿಂದ ಪಾಲಕರು ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿಲ್ಲ. ಸಂಜೆಯಾದರೆ ಸಾಕು ಸೊಳ್ಳೆ ಕಡಿತ ವಿಪರೀತ. ರೋಗ ಹರಡುವ ಭೀತಿ ಎದುರಾಗಿದೆ ಎಂದು ಕೃಷ್ಣವೇಣಿ, ಶ್ರೀನಿವಾಸ ಆತಂಕ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಯ್ಯಸ್ವಾಮಿ, ಅಭಿವೃದ್ಧಿ ಅಧಿಕಾರಿ ವಿದ್ಯಾವತಿ, ಸದಸ್ಯ ಬಸವರಾಜ್ ಕುಳಗಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿ, ಶೀಘ್ರದಲ್ಲೆ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಕಳೆದ ವರ್ಷ ಇಂಥಹದೆ ಭರವಸೆ ಸಿಕ್ಕಿತ್ತು. ಆದರೆ ಅದೆಲ್ಲಾ ಹುಸಿಯಾಯಿತು. ಈಗಲಾದರೂ ಪರಿಹಾರ ದೊರೆಯುವುದೇ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.