ADVERTISEMENT

ಮಾದಿಗ ದಂಡೋರ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:45 IST
Last Updated 22 ಡಿಸೆಂಬರ್ 2012, 8:45 IST

ಕುಷ್ಟಗಿ: ನ್ಯಾಯಮೂರ್ತಿ   ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬುದನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಾ.ಅಂಬೇಡ್ಕರ್ ನಗರದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ನಂತರ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಸಮಿತಿ ಮುಖಂಡರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ವಿಷಯದಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ನ್ಯಾಯ ಕೇಳಲು ಹೋದ ಅಮಾಯಕರಿಗೆ ಸುವರ್ಣ ವಿಧಾನಸೌಧದ ಬಳಿ ಪೊಲೀಸರು ಏಕಾಏಕಿ ಲಾಠಿ ಏಟು ನೀಡಿ ಹಲ್ಲೆ ನಡೆಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಿರಂತರ
ಬರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.ನಂತರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬರೆದ ಮನವಿಯನ್ನು ತಹಶೀಲ್ದಾರ ವೀರೇಶ ಬಿರಾದಾರ ಅವರ ಮೂಲಕ ಸಲ್ಲಿಸಲಾಯಿತು.

ಸಂಘಟನೆಯ ಗೌರವಾಧ್ಯಕ್ಷ ಚಂದ್ರಶೇಖರ ಹಿರೇಮನಿ, ಅಧ್ಯಕ್ಷ ಹನಮಂತಪ್ಪ ಕಟ್ಟಿಮನಿ, ಉಪಾಧ್ಯಕ್ಷ ನಾಗರಾಜ ಇಂಡಿ ಮತ್ತಿತರರು ಇದ್ದರು. ಸಬ್ ಇನ್ಸ್‌ಪೆಕ್ಟರ್ ಮಹಾದೇವ ಪಂಚಮುಖಿ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.