ಯಲಬುರ್ಗಾ: ಗ್ರಾಮಕ್ಕೆ ಬೇಕಾಗುವಷ್ಟು ನೀರು ಲಭ್ಯವಿದ್ದರೂ ನೀರು ಪೂರೈಸುವ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೃತಕ ಅಭಾವ ಉಂಟಾಗಿ ನೀರಿಗಾಗಿ ಜನರು ಪರದಾಡುವಂತಾಗಿದೆ ಎಂದು ತಾಲ್ಲೂಕಿನ ಮುರಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದಿಂದಲೂ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿರುವ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದು ಇಲ್ಲದಂತಿದ್ದಾರೆ. ಗ್ರಾಮದ ಜನಸಂಖ್ಯೆಗೆ ತಕ್ಕಂತೆ ಲಭ್ಯವಾಗುವ ರೀತಿಯಲ್ಲಿ ನಾಲ್ಕು ಕೊಳವೆಬಾವಿಗಳಿಂದ ದೊಡ್ಡ ಟ್ಯಾಂಕ್ಗೆ ನೀರು ಪೂರೈಸಲಾಗುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿ ಜನತೆಗೆ ನೀರು ಪೂರೈಸುವ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮದ ನವಕರ್ನಾಟಕ ಯುವಶಕ್ತಿ ಜಿಲ್ಲಾ ಕಾರ್ಯದರ್ಶಿ ನಾಗರಾಜ ಹಾಲಳ್ಳಿ, ಶರಣಪ್ಪ ಕುರ್ನಾಳ ಸೇರಿದಂತೆ ಅನೇಕರು ದೂರಿದ್ದಾರೆ.
ಗ್ರಾಮದ ಎರಡು ದೊಡ್ಡ ನೀರಿನ ಟ್ಯಾಂಕ್ನಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಸ್ಥರಿಗೆ ಸರಿಯಾಗಿ ನೀಡುತ್ತಿಲ್ಲ. ಮಾರ್ಗಮಧ್ಯದಲ್ಲಿಯೇ ಸಾಕಷ್ಟು ನೀರು ಪೋಲಾಗುತ್ತಿದೆ. ನಿರ್ವಹಣೆಯ ಕೊರತೆಯಿಂದ ಗ್ರಾಮಕ್ಕೆ ನೀರಿನ ಅಭಾವ ಉಂಟಾಗುತ್ತಿರುವುದರಿಂದ ಜನರು ಬವಣೆ ಅನುಭವಿಸುವಂತಾಗಿದೆ.
ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳ ಬಗ್ಗೆ ಕಿಂಚಿತ್ತು ಆಸಕ್ತಿ ತೋರುತ್ತಿಲ್ಲ. ಇದರಿಂದ ಮುರಡಿ ಗ್ರಾಮದ ಜನತೆ ಅಗತ್ಯ ಸೌಲಭ್ಯಕ್ಕಾಗಿ ಪರಿದಾಡಬೇಕಾಗಿದೆ. ಶಾಸಕರಿಗೆ ಈ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಗ್ರಾಮದಲ್ಲಿಯೇ 8ಜನ ಗ್ರಾಪಂ ಸದಸ್ಯರಿದ್ದರೂ ಗ್ರಾಮಕ್ಕೆ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹವಳೆಪ್ಪ ತೆಗ್ಗಿಹಾಳ, ಚಿದಾನಂದ ಛಲವಾದಿ, ಹನಮಂತ ಗುರಿಕಾರ ಇತರರುಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನಾಲ್ಕು ಕೈ ಪಂಪುಗಳಿದ್ದು ಅವುಗಳಲ್ಲಿ ಮೂರರಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ನೀರು ಬರುತ್ತಿದೆ. ಶಾಲೆಯ ಮಕ್ಕಳಿಗೂ ನೀರಿನ ಕೊರತೆಯಿಂದಾಗಿ ಊಟ ಮಾಡಿದ ನಂತರ ನೀರು ಕುಡಿಯಲು ಮನೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಡುಗೆ ಮಾಡಲು ಕೂಡಾ ನೀರು ಪೂರೈಕೆಯಾಗದೇ ಬಿಸಿಯೂಟಕ್ಕೆ ತೊಂದರೆಯಾಗುತ್ತಿದೆ. ಪಂಚಾಯಿತಿ ಪಕ್ಕದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದು ಅದಕ್ಕೂ ಕೂಡಾ ನೀರು ಪೂರೈಸುತ್ತಿಲ್ಲ.
ನಿರ್ಲಕ್ಷ್ಯ ವಹಿಸುವ ಪಂಚಾಯಿತಿ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕಾಗಿದೆ. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಆಸಕ್ತಿ ತೋರಬಕು. ಮಾರ್ಗ ಮಧ್ಯದಲ್ಲಿ ಸಾಕಷ್ಟು ನೀರು ಪೋಲಾಗುತ್ತಿರುವುದನ್ನು ಪತ್ತೆಹಚ್ಚಿ ಹೊಸ ಪೈಪು ಅಳವಡಿಸಿ ಗ್ರಾಮಕ್ಕೆ ಸರಿಯಾಗಿ ನೀರು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸದೇ ಹೋದರೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ನಾಗರಾಜ, ಚಿದಾನಂದ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.