ADVERTISEMENT

ಮುಸ್ಲಿಮರೇ ಇಲ್ಲದ ಊರಲ್ಲಿ ಅದ್ಧೂರಿ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 8:57 IST
Last Updated 1 ಅಕ್ಟೋಬರ್ 2017, 8:57 IST
ಕುಕನೂರು ಸಮೀಪದ ಮಸಬಹಂಚಿನಾಳ ಗ್ರಾಮದ ಮಸೀದಿಯಲ್ಲಿರುವ ಮೊಹರಂ ಫೀರಾ
ಕುಕನೂರು ಸಮೀಪದ ಮಸಬಹಂಚಿನಾಳ ಗ್ರಾಮದ ಮಸೀದಿಯಲ್ಲಿರುವ ಮೊಹರಂ ಫೀರಾ   

ಕುಕನೂರು: ಸಮೀಪದ ಮಸಬ ಹಂಚಿನಾಳ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬಗಳಿಲ್ಲ. ಆದರೂ ಹಿಂದೂಗಳೇ ಸೇರಿ ಅದ್ಧೂರಿಯಿಂದ ಮೊಹರಂ ಆಚರಿಸುತ್ತಾರೆ. ಹಿಂದೂ ಧರ್ಮೀಯರೇ ಸೇರಿ ಸುಂದರ ಮಸೀದಿ ನಿರ್ಮಿಸಿದ್ದಾರೆ. ಗ್ರಾಮಸ್ಥರು ಜಾತಿ ಬೇಧ ಮರೆತು ಮೊಹರಂ ಆಚರಿಸುತ್ತಾರೆ.

ಮೊಹರಂ ಆಚರಣೆ ನಿಮಿತ್ತ ಮೂರ್ನಾಲ್ಕು ದಿನಗಳ ಕಾಲ ಜರುಗುವ ಓದಿಸುವಿಕೆ, ದೇವರ(ಪಾಂಜಾ) ಕೆಂಡ ಸೇವೆ (ಅಗ್ನಿ ಹಾಯು­ವುದು), ದೇವರು ಹಾಗೂ ಡೋಲಿ ಹೊರುವುದು ಸೇರಿ ಎಲ್ಲ ಆಚರಣೆ­ಗಳನ್ನೂ ಹಿಂದೂಗಳೇ ನಿರ್ವಹಿಸು­ತ್ತಾರೆ.

ಐದು ವರ್ಷದ ಹಿಂದೆ ಗ್ರಾಮಸ್ಥರೆಲ್ಲ ಸೇರಿ ಸುಂದರ­ವಾದ ಹೊಸ ಡೋಲಿಯನ್ನು ನಿರ್ಮಿಸಿದ್ದು, ಮೊಹರಂ ಕೊನೆಯ ದಿನ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಹಿಂದೂಗಳು ಗುರು­ವಾರ ಮತ್ತು ಭಾನುವಾರ ಮಸೀದಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ADVERTISEMENT

‘ನಮ್ಮೂರಾಗ ಮುಸ್ಲಿಂ ಜನ ಇಲ್ಲರಿ. ಆದ್ರೂ ನಾವೆಲ್ಲ ಕೂಡಿಕೊಂಡು ಭಾಳ ಛಲೊತ್ನಾಗಿ ಹಲೆಹಬ್ಬ (ಮೊಹರಂ) ಮಾಡ್ತಿವ್ರಿ. ದೇವರ ಪೂಜಾ ಮಾಡಕಾ ಯಾವ ಜಾತಿ ಆದ್ರ ಏನ್ರಿ. ದೇವ್ರ ಅಂದ್ರ ಎಲ್ಲ ಒಂದ ಅನಕೊಂಡು ಎಲ್ಲರೂ ಸೇರಿ ಚಂದಗೆ ಮಾಡ್ತಿವ್ರಿ.’ ಎನ್ನುತ್ತಾರೆ ಗ್ರಾಮದ ಮುಖಂಡ ತಿಮ್ಮಣ್ಣ ದೇವರಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.