ADVERTISEMENT

ಮೆಟ್ರಿಕ್ ಮೇಳ: ಶಾಲೆಯಲ್ಲಿ ಭರ್ಜರಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:05 IST
Last Updated 4 ಅಕ್ಟೋಬರ್ 2011, 9:05 IST

ಕನಕಗಿರಿ: ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಭರ್ಜರಿ ವ್ಯಾಪಾರ ನಡೆಯಿತು.

ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಸಂಪನ್ಮೂಲ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಹಾಗೂ ಕನಕಗಿರಿ ದಕ್ಷಿಣ ವಲಯ ವ್ಯಾಪ್ತಿಯ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಸೋಮವಾರ ಹಮ್ಮಿಕೊಂಡಿದ್ದ `ಮೆಟ್ರಿಕ್ ಮೇಳ~ದಲ್ಲಿ ವಿದ್ಯಾರ್ಥಿಗಳು ವಿವಿಧ ತರಕಾರಿ, ಕಾಯಿಗಡ್ಡೆ, ಹಣ್ಣುಹಂಪಲು, ತಿಂಡಿ ತಿನ್ನಿಸುಗಳು, ಇತರೆ ತಂಪು ಪಾನೀಯಗಳನ್ನು ಮಾರಾಟ ಮಾಡಿದರು.

ಶಾಲೆಗೆ ಭೇಟಿ ನೀಡಿದ ವಿವಿಧ ಶಾಲೆಗಳ ಶಿಕ್ಷಕರು, ಪಾಲಕರಿಗೆ ಮುಗಿ ಬಿದ್ದು ತಾವು ತಂದ ತರಕಾರಿ, ಇತರೆ ಸಾಮಾಗ್ರಿಗಳನ್ನು ಖರೀದಿ ಮಾಡುವಂತೆ ಪೀಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ತಕ್ಕಡಿಯನ್ನು ಕೈಯಲ್ಲಿ ಹಿಡಿದು ಟೊಮೊಟೊ, ಈರುಳ್ಳಿ, ಬದನೆಕಾಯಿ, ಇತರೆ ಕಾಯಿಗಡ್ಡೆಗಳನ್ನು ತೂಕ ಮಾಡುತ್ತಿದ್ದ ವಿದ್ಯಾರ್ಥಿಗಳು ಅಪ್ಪಟ ವ್ಯಾಪಾರಿಗಳಂತೆ ಕಂಡು ಬಂದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಈಶಪ್ಪ ಇಟಗಿ `ಮೇಟ್ರಿಕ್ ಮೇಳ~ಕ್ಕೆ ಚಾಲನೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಯಮನೂರಪ್ಪ ಬೋಂದಾಡೆ , ಮುಖ್ಯಗುರು ಈಶಪ್ಪ ಇಟಗಿ ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ, ಹಾಗೂ ಅಳತೆ, ತೂಕ, ಲೀಟರ್, ಮಾಪನ ವ್ಯವಸ್ಥೆಯ ಪರಿಕಲ್ಪನೆ ಮೂಡಿಸಲು ಮೆಟ್ರಿಕ್ ಮೇಳ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಿಆರ್‌ಪಿ ಬಸವರಾಜ ಸಜ್ಜನ್, ಶಿಕ್ಷಕರ ಸಂಘದ ನಿರ್ದೇಶಕ ದೊಡ್ಡಪ್ಪ ಕವಿತಾಳ, ಹಿರಿಯ ಶಿಕ್ಷಕ ಶ್ಯಾಮೀದಸಾಬ ಆಗೋಲಿ, ಶೇಖರಯ್ಯ ಮಾತನಾಡಿದರು.

ಮುಖ್ಯಗುರು ಯಲ್ಲಪ್ಪ ಹಿರೇಖ್ಯಾಡ, ಉಮೇಶರೆಡ್ಡಿ ಆಲೂರು ಇತರರು ಹಾಜರಿದ್ದರು. ದೀಪಾ ಗಡಗಿ ಸ್ವಾಗತಿಸಿದರು. ನಾಗರತ್ನ ನಿರೂಪಿಸಿದರು, ನಿರ್ಮಲ ವಂದಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.