ADVERTISEMENT

ಮೇಷ್ಟ್ರೇ ನಮಸ್ಕಾರ...

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:25 IST
Last Updated 5 ಸೆಪ್ಟೆಂಬರ್ 2013, 6:25 IST

ಕೊಪ್ಪಳ: ಯಾವ ಶಿಕ್ಷಕನಿಗೆ ವಿದ್ಯಾರ್ಥಿಗಳ ಮೇಲೆ ಪ್ರೀತಿ ಇರುವುದಿಲ್ಲವೋ ಅವನು ಕಲಿಸುವ ವಿದ್ಯೆ ವಿದ್ಯಾರ್ಥಿಗಳ ತಲೆಗೆ ಹತ್ತುವುದೇ ಇಲ್ಲ... - ಹೀಗೆ 85ರ ಹರೆಯದ ಮುಕ್ತಿಂಸಾಬ ಸುಲ್ತಾನ್‌ಸಾಬ ಸವದತ್ತಿ (ಎಂ.ಎಸ್. ಸವದತ್ತಿ) ಮೇಷ್ಟ್ರು ಹೇಳುತ್ತಲೇ ಇದ್ದರು.

ಅಂದು ನನಗಿದ್ದ 25 ರೂಪಾಯಿ ಸಂಬಳದಲ್ಲಿ ನನ್ನ ಬದುಕು, ಸಂಸಾರ ನೆಮ್ಮದಿಯಿಂದ ಇತ್ತು. ಈಗಲೂ ಖುಷಿಯಾಗಿದ್ದೇನೆ... ಅಂದು ಶಿಕ್ಷಕ- ವಿದ್ಯಾರ್ಥಿಗಳ ಮಧ್ಯೆ ಪ್ರೇಮವಿತ್ತು. ಬಾಂಧವ್ಯ ಇತ್ತು. ಆ ನನ್ನ ವಿದ್ಯಾರ್ಥಿಗಳು ಈಗಲೂ ಅದೇ ಭಾವ ಹೊಂದಿದ್ದಾರೆ...

-ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಹಿರಿಯ ಶಿಕ್ಷಕರನ್ನು `ಪ್ರಜಾವಾಣಿ' ಮಾತನಾಡಿಸಿತು. ಅಂದಿಗೂ ಇಂದಿಗೂ ಆಗಿರುವ ಬದಲಾವಣೆಗಳು, ಬದಲಾದ ಭಾವನಾತ್ಮಕ ಸಂಬಂಧಗಳ ಎಂಬ ಬಗ್ಗೆ ಪುಟ್ಟ ಚರ್ಚೆಗಳೂ ನಡೆದವು.

ಸವದತ್ತಿ ಅವರು ಹೇಳುವಂತೆ, ಇಂದು ಗುರುವಿನ ಬದಲು ವಿದ್ಯಾರ್ಥಿಯೇ ಮುಖ್ಯ. ಅವನಿಗೇನು ಬೇಕು ಎಂಬುದನ್ನು ತಿಳಿದು ಕಲಿಸಬೇಕು.

ಗುರುವಿನ ವ್ಯವಹಾರ ರಹಸ್ಯವಾಗಿದ್ದರೂ ಶಿಷ್ಯನ ಮನಸ್ಸಿಗೆ ಹೇಗಾದರೂ ತಲುಪುತ್ತದೆ. ನಾನೇನಾದರೂ ತಪ್ಪು ಮಾಡಿದರೆ ಶಿಷ್ಯ ಅದನ್ನೇ ಮುಂದುವರಿಸುತ್ತಾನೆ. ಆ ತಪ್ಪು ನೀನು ಮಾಡಬೇಡ ಎಂದರೂ ಶಿಷ್ಯ ಕೇಳುವುದಿಲ್ಲ. ಒತ್ತಾಯಿಸಿ ಹೇಳುವ ನೈತಿಕ ಅರ್ಹತೆಯೂ ಶಿಕ್ಷಕನಿಗೆ ಇರುವುದಿಲ್ಲ. ಈಗ ಆಗಿರುವುದೂ ಅದೇ... ಎನ್ನುವಾಗ ಸವದತ್ತಿ ಮೇಷ್ಟ್ರ ಮಾತಿನಲ್ಲಿ ಗಾಢ ವಿಷಾದವಿತ್ತು.

ತಮ್ಮ ಸಹೋದ್ಯೋಗಿಗಳಾಗಿದ್ದ, ನಾಡಿನಲ್ಲಿ ಖ್ಯಾತನಾಮರಾದ ಅನೇಕರ ಹೆಸರುಗಳನ್ನು ಉಲ್ಲೇಖಿಸಿದ ಮೇಷ್ಟ್ರು, ಅಂದು ಶಾಲೆಗೆ ಸೇರಿಸಬೇಕಾದರೆ ವಿದ್ಯಾರ್ಥಿಗಳ ಅರ್ಹತೆ ನೋಡುತ್ತಿದ್ದರು.

ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕನಾದ ನನ್ನ ಆಯ್ಕೆಯನ್ನೂ ಅರ್ಹತೆ ಮೇಲೆ ಮಾಡಿದರು. ನನ್ನ (ಮುಸ್ಲಿಂ) ಜಾತಿ ಎಂದು ನೋಡಲಿಲ್ಲ. ಆದರೆ ಈಗ ನೋಡಿ. ರೊಕ್ಕ ಇದ್ದವರಿಗೆ ಮಣೆ.

ನನಗೆ ಖಾತ್ರಿಯಿದೆ. ನನ್ನ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ದುಷ್ಚಟ ಇಲ್ಲ. ಎಲ್ಲರೂ ಒಳ್ಳೆಯ ಸ್ಥಾನಮಾನ    ಹೊಂದಿದ್ದಾರೆ.
-ಆದರೆ, ನಾನೊಬ್ಬನೇ ಸಮಾಜ ಸುಧಾರಣೆ ಮಾಡಲಾಗದು. ನಮ್ಮ ಅಂತರಂಗದಲ್ಲೇ ಒಳ್ಳೆಯ ಬದಲಾವಣೆಯ ಪ್ರಜ್ಞೆ ಮೂಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.