ADVERTISEMENT

ರಜೆ ರಹಿತ ಕಾಯಕದ ಶ್ರೀದೇವಿ ಟೀಚರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:22 IST
Last Updated 5 ಸೆಪ್ಟೆಂಬರ್ 2013, 6:22 IST

ಕನಕಗಿರಿ: ಇಲ್ಲಿಗೆ ಸಮೀಪದ ಹುಲಿಹೈದರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳಿಂದಲೂ ಶಿಕ್ಷಕಿಯಾಗಿರುವ ಶ್ರೀದೇವಿ ಶಿರಿವಾರ ಅವರ ಕಾಯಕ ನಿಷ್ಠೆ ಮೆಚ್ಚುವಂತದ್ದು. ಕುಷ್ಟಗಿ ತಾಲ್ಲೂಕಿನ ತಾವರಗೆರೆ ಗ್ರಾಮದ ಶಿರಿವಾರ ಮನೆತನದ ಶ್ರೀದೇವಿ ವೃತ್ತಿಯಲ್ಲಿ ಹೆಸರುವಾಸಿ. 

ತಮ್ಮ ಸೇವೆಯ ಆರು ವರ್ಷಗಳ ಕಾಲ ರಜೆ ರಹಿತವಾಗಿ ಕೆಲಸ ಮಾಡಿದ್ದಾರೆ. ಈಗ ತುರ್ತು ಸಂದರ್ಭದಲ್ಲಿ ವರ್ಷದಲ್ಲಿ 2-3 ದಿನ ಮಾತ್ರ ರಜೆ ತೆಗೆದುಕೊಂಡಿದ್ದಾರೆ ಎಂದು ಪ್ರಭಾರ ಮುಖ್ಯ ಶಿಕ್ಷಕ ಬಾಲಾಜಿ ಹೇಳುತ್ತಾರೆ.

ಶ್ರೀದೇವಿ ಪ್ರತಿದಿನ ಬೆಳಿಗ್ಗೆ 8.45 ಗಂಟೆಯೊಳಗೆ ಶಾಲೆಯ ಮೈದಾನದಲ್ಲಿ ಹಾಜರಾಗುತ್ತಾರೆ. ಮೈದಾನ ಸ್ವಚ್ಛತೆ, ಸಸಿಗಳಿಗೆ ನೀರುಣಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

ಪ್ರಾಣಿ, ಪಕ್ಷಿ, ವ್ಯಕ್ತಿ ಪರಿಚಯ, ಅಕ್ಷರ ಜ್ಞಾನ ಮೂಡಿಸುವ ಪ್ಲಾಶ್ ಕಾರ್ಡ್,  ಕರ್ನಾಟಕ, ಭಾರತ, ಯುರೋಪ್ ದೇಶಗಳ ನಕಾಶೆ... ಹೀಗೆ ಪಠ್ಯಕ್ರಮಕ್ಕೆ ಸಂಬಂಧಿಸಿದ ಬೋಧನಾ ಸಾಮಗ್ರಿಗಳನ್ನು ತಯಾರು ಮಾಡಿದ್ದಾರೆ.

ಇವರ ಪಾಠ ಯೋಜನೆ (ಲೆಸನ್‌ಪ್ಲಾನ್), ಕ್ರಿಯಾ ಸಂಶೋಧನೆ, ಪ್ರಶ್ನೆ ಪತ್ರಿಕೆ ಹಾಗೂ ಇತರ ಕಲಿಕಾ ಮಾದರಿಗಳನ್ನು ಕೊಪ್ಪಳದ `ಡಯಟ್' ಸಂಸ್ಥೆಯ ಉಪನ್ಯಾಸಕರು ಮೆಚ್ಚಿ ಗುಲ್ಬರ್ಗದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯಕ್ಕೆ ಕಳುಹಿಸಿದ್ದಾರೆ ಎಂದು ಶಿಕ್ಷಕ ಚೆನ್ನಪ್ಪ ನೆನಪಿಸುತ್ತಾರೆ.

ಇವರ ಸೇವೆಯನ್ನು ಮೆಚ್ಚಿ ಶಿಕ್ಷಣ ಇಲಾಖೆ ಮತ್ತು ಕಾರಟಗಿಯ ನೆಹರೂ ವಿದ್ಯಾಸಂಸ್ಥೆ `ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.