ADVERTISEMENT

ರಾಜಕಾರಣಿಗಳೇ ಕಾಲಿಡಬೇಡಿ!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 6:35 IST
Last Updated 2 ಏಪ್ರಿಲ್ 2011, 6:35 IST
ರಾಜಕಾರಣಿಗಳೇ ಕಾಲಿಡಬೇಡಿ!
ರಾಜಕಾರಣಿಗಳೇ ಕಾಲಿಡಬೇಡಿ!   

ಕುಷ್ಟಗಿ: ‘ಪ್ರಾಣ ಹೋದರೂ ಸರಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ, ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳ ಅನುಕಂಪ ಬೇಕಿಲ್ಲ, ಅಷ್ಟೇ ಏಕೆ ಅವರು ನಮ್ಮ ಬಳಿ ಬರುವುದೇ ಬೇಡ’.ದಾಳಿಂಬೆ ಬೆಳೆದು ಕೈಸುಟ್ಟುಕೊಂಡು ಸಾಲ ಮನ್ನಾಕ್ಕೆ ಒತ್ತಾಯಿಸಿ ಇಲ್ಲಿಯ ತಹಸೀಲ್ದಾರರ ಕಚೇರಿ ಬಳಿ ಕಳೆದ ಎರಡು ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಕೊಪ್ಪಳ ಜಿಲ್ಲೆಯ ರೈತರು ಅಧಿಕಾರಸ್ಥ ರಾಜಕಾರಣಿಗಳ ಬೆಂಬಲ ಬೇಕಿಲ್ಲವೇ ಎಂಬುದಕ್ಕೆ ಆಕ್ರೋಶಗೊಂಡು ಹೇಳಿದ ಮಾತಿದು.
 

ಜಿಲ್ಲೆಯ ರೈತರು ಶಾಂತಿಯುತವಾಗಿ ಸರದಿ ಮೇಲೆ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು ಶುಕ್ರವಾರ ಈ ತಾಲ್ಲೂಕಿನ ರೈತರೊಂದಿಗೆ ಗಂಗಾವತಿ ತಾಲ್ಲೂಕಿನ ನವಲಿ ಮತ್ತು ಹುಲಿಹೈದರ ಹೋಬಳಿ, ಯಲಬುರ್ಗಾ ತಾಲ್ಲೂಕುಗಳಿಗೆ ಸೇರಿದ ರೈತರು ಪಾಲ್ಗೊಂಡಿದ್ದರು. ಆದರೆ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಜಿಲ್ಲಾಡಳಿತದ ಪರವಾಗಿ ಒಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಅಷ್ಟೇ ಅಲ್ಲ ಅಧಿಕಾರಸ್ಥ ಒಬ್ಬ ರಾಜಕಾರಣಿಯೂ ರೈತರ ನೋವಿಗೆ ಸ್ಪಂದಿಸದಿರುವುದು ಕಂಡುಬಂದಿತು.
 

ಸರ್ಕಾರದ ವಿರುದ್ಧ ಹೋರಾಡಲು ರೈತರ ತೋಳುಗಳು ಗಟ್ಟಿಯಾಗಿವೆ, ಹಿಂದೆ ಭರವಸೆ ನೀಡಿದ್ದ ರಾಜಕೀಯ ಜನರು ನಮ್ಮ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಹಾಗಾಗಿ ಯಾರ ಹಂಗಿಲ್ಲದೇ ಸ್ವಂತ ಬಲದಿಂದ ಸರ್ಕಾರವನ್ನದು ಮಣಿಸಲು ಮುಂದಾಗುತ್ತೇವೆ ಎಂದೆ ಪ್ರಮುಖ ದಾಳಿಂಬೆ ಬೆಳೆಗಾರರಾದ ಅತ್ತಾರ್, ಅಬ್ದುಲ್ ನಯೀಮ್, ಜಯತೀರ್ಥ ದೇಸಾಯಿ, ಹುಲಿಹೈದರದ ವೀರನಗೌಡ, ದೊಡ್ಡಪ್ಪ, ನವಲಿಯ ಅಂದಾನಪ್ಪ ಸಾಹುಕಾರ, ಪಂಪಾಪತಿ, ಯಲಬುರ್ಗಾದ ಸಣ್ಣಹನುಮಪ್ಪ, ಶಾಖಾಪೂರದ ಮಾನಪ್ಪ ಬಡಿಗೇರ ಮೊದಲಾದವರು ಘೋಷಿಸಿದರು.
 

ADVERTISEMENT

ಇಡಿ ರಾಜ್ಯದಲ್ಲೇ ಅತಿ ಹೆಚ್ಚು ದಾಳಿಂಬೆಯನ್ನು ರಫ್ತು ಮಾಡಿ ಸರ್ಕಾರಕ್ಕೆ ಸಾಕಷ್ಟು ವಿದೇಶಿ ವಿನಿಮಯಕ್ಕೆ ಕಾರಣವಾಗಿದ್ದ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ರೈತರು ಬೀದಿಗೆ ಬಿದ್ದಿದ್ದಾರೆ. ಔಷಧಕ್ಕೆ ಬೇಕೆಂದರೂ ದಾಳಿಂಬೆ ಇಲ್ಲ, ಹೀಗೇಕಾಯಿತು? ಎಂಬುದನ್ನು ರಾಜ್ಯ ಸರ್ಕಾರ ಯೋಚಿಸಬೇಡವೆ ಎಂದೆ ಪ್ರಶ್ನಿಸಿದರು.
 

ನಾಪತ್ತೆ: ತಾಲ್ಲೂಕಿನ ದಾಳಿಂಬೆ ಬೆಳೆಗಾರ ರೈತರ ಪೈಕಿ ಕೆಲ ಭಾರಿ ಕುಳಗಳು ಇದ್ದರೂ ಧರಣಿಯಲ್ಲಿ ಪಾಲ್ಗೊಂಡಿಲ್ಲ, ಅಷ್ಟೇ ಏಕೆ ಆರಂಭದ ದಿನ ಅಂಗಿ ಕಳಚಿ ಫೋಟೋಕ್ಕೆ ಫೋಸು ನೀಡಿದ್ದ ಬಹುತೇಕ ರೈತ ಪ್ರಮುಖರು ಎರಡನೇ ದಿನದ ಧರಣಿಯಿಂದ ಕಾಲ್ಕಿತ್ತಿದ್ದು ಅಚ್ಚರಿ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.