ADVERTISEMENT

ರೈತರಿಗೆ ಬೇಡವಿನ್ನು ಬಿತ್ತನೆ ಬೀಜದ ಚಿಂತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 7:45 IST
Last Updated 4 ಜೂನ್ 2011, 7:45 IST

ಗಂಗಾವತಿ: ಕೃಷಿ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದ ಪೂರೈಸಬೆಕಿದ್ದ ಬತ್ತದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾದ ಬಗ್ಗೆ ವರದಿ ಪ್ರಕಟವಾದ ಕೂಡಲೆ ಎಚ್ಚೆತ್ತ ಇಲಾಖೆಯ ಸಿಬ್ಬಂದಿ ಸೂಕ್ತ ಪ್ರಮಾಣದ ಬೀಜ ದಾಸ್ತಾನಿಗೆ ಏರ್ಪಾಡು ಮಾಡುತ್ತಿದ್ದಾರೆ.  

ಮುಂಗಾರು ಹಂಗಾಮು ಪ್ರವೇಶಿಸಿದ್ದರೂ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದೊರೆಯದೇ ರೈತ ಪರದಾಡುತ್ತಿರುವ ಬಗ್ಗೆ `ಪ್ರಜಾವಾಣಿ~ ಗುರುವಾರದ ಸಂಚಿಕೆಯಲ್ಲಿ `ಬಿತ್ತನೆ ಬೀಜದ ಕೊರತೆ; ರೈತರ ಪರದಾಟ~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಂಬಂಧಿತ ಇಲಾಖೆಯ ಗಮನ ಸೆಳೆದಿತ್ತು.

ಈ ಹಿನ್ನೆಲೆ ಎಚ್ಚೆತ್ತ ಕೃಷಿ ಇಲಾಖೆ ಗುರುವಾರದಿಂದಲೇ ಬತ್ತದ ಬೀಜಗಳನ್ನು ತಾಲ್ಲೂಕು ಮತ್ತು ಹೋಬಳಿಗಳಿಗೆ ರವಾನಿಸಿದೆ. ಅಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬೀಜ ವಿತರಣೆ ಪ್ರಕ್ರಿಯೆ ಆರಂಭವಾಗಿದೆ.

ದಾಸ್ತಾನು ವಿವರ: ಗುರುವಾರ ಕೃಷಿ ಇಲಾಖೆ ತಾಲ್ಲೂಕಿನ ವಿವಿಧ ಆರ್.ಎಸ್.ಕೆ.ಗಳಿಗೆ ಪೂರೈಸಿದ ಬಿತ್ತನೆ ಬೀಜದ ಮಾಹಿತಿ ಈ ರೀತಿಯಾಗಿದೆ. 210 ಚೀಲ ಬತ್ತ, 465 ತೊಗರಿ, 1550 ಸಜ್ಜೆ, 3210 ಮೆಕ್ಕೆಜೋಳ, 520 ಸೂರ್ಯಕಾಂತಿ ಮತ್ತು 15 ಕ್ವಿಂಟಾಲ್ ಜೋಳ ಪೂರೈಸಿದೆ.

ಶುಕ್ರವಾರ ಹೆಚ್ಚುವರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ತಾಲ್ಲೂಕು ಕಚೇರಿಗೆ 300 ಬತ್ತ, 70 ಮೆಕ್ಕೆಜೋಳ ಹಾಗೂ ಐದು ಕ್ವಿಂಟಾಲ್ ಜೋಳ ಪೂರೈಕೆಯಾಗಿದೆ. ಇದುವರೆಗೂ ಒಟ್ಟು 510 ಕ್ವಿಂಟಾಲ್ ಬತ್ತದ ಬೀಜ ಸಂಗ್ರಹವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ವಿಸ್ತೀರ್ಣ ಎಷ್ಟು: ತಾಲ್ಲೂಕಿನಲ್ಲಿ ಒಟ್ಟು 35,800 ಹೆಕ್ಟೇರು ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ, 6,200 ಹೆಕ್ಟೇರಿನಲ್ಲಿ ಸಜ್ಜೆ ಮತ್ತು 2800 ಹೆಕ್ಟೇರಿನಷ್ಟು ಕೃಷಿ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ ಕೃಷಿ ಇಲಾಖೆ ಪೂರೈಸುತ್ತಿರುವ ಪ್ರಮಾಣ ಬೀಜ ರೈತರಿಗೆ ಸಾಕಾಗುವುದೇ ಎಂಬ ಸಂದೇಹ ವ್ಯಕ್ತವಾಗಿದೆ.

ನಿರ್ವಹಿಸುತ್ತೇವೆ; ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 42.950 ಸಣ್ಣ ಮತ್ತು ಅತೀಸಣ್ಣ ರೈತರಿದ್ದಾರೆ. ಐದು ಎಕರೆಗಿಂತ ಹೆಚ್ಚು ಕೃಷಿ ಜಮೀನು ಇರುವ ರೈತರು ಕೃಷಿ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ಹುನಗುಂದಾ ತಿಳಿಸಿದ್ದಾರೆ.

ದೊಡ್ಡ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಬೀಜ ವಿತರಿಸಲಾಗುತ್ತಿದೆ. ಎಲ್ಲವೂ ಸೇರಿ ತಾಲ್ಲೂಕಿನಲ್ಲಿ ಒಟ್ಟು 39,165 ಹೆಕ್ಟೇರು ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಧ್ಯ ಪೂರೈಕೆಯಾಗಿರುವ ಬೀಜದಲ್ಲಿಯೆ ನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.