ADVERTISEMENT

ರೋಗಮುಕ್ತ ದಾಳಿಂಬೆ: ಸಫಲತೆ ಕಂಡ ರೈತ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 11:00 IST
Last Updated 15 ಜನವರಿ 2012, 11:00 IST

ಕುಷ್ಟಗಿ: ರಾಜ್ಯದ ಹದಿಮೂರು ಜಿಲ್ಲೆಯಲ್ಲೆಯಲ್ಲಿ ಬೆಳೆಯಲಾಗಿದ್ದ ದಾಳಿಂಬೆ ದುಂಡಾಣು ಅಂಗಮಾರಿ ರೋಗಬಾಧೆಯಿಂದ ಹಾಳಾಗಿ ಕಂಗೆಟ್ಟ ಬಹುತೇಕ ಬೆಳೆಗಾರರ ಪಾಲಿಗೆ ದಾಳಿಂಬೆ ಒಂದು ಕೆಟ್ಟಕನಸು. ಆದರೆ ರೋಗಬಾಧೆಯ ನಡುವೆಯೂ ಉತ್ತಮ ಫಸಲು ತೆಗೆಯುವ ಕನಸು ನನಸಾಗಿಸಿಕೊಳ್ಳುವಲ್ಲಿ ತಾಲ್ಲೂಕಿನ ಬೆರಳೆಣಿಕೆ ರೈತರು ಮುಂದಡಿ ಇಡುತ್ತಿರುವುದು ಅಪರೂಪದ ಸಂಗತಿ.

ಸರ್ಕಾರದ ಮಾಹಿತಿಯ ಪ್ರಕಾರ ಶೇ 80ರಷ್ಟು ಪ್ರದೇಶದಲ್ಲಿನ ದಾಳಿಂಬೆ ಮಹಾಮಾರಿ ಬ್ಯಾಕ್ಟೇರಿಯಲ್ ಬ್ಲೈಟ್ಸ್ ಆಪೋಶನ ತೆಗೆದುಕೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿನ ಸುಮಾರು 4846 ಹೆಕ್ಟರ್‌ಗಳ ಪೈಕಿ 3876.80 ಹೆಕ್ಟರ್ ರೋಗಬಾಧೆಗೆ ತುತ್ತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಅತಿಹೆಚ್ಚು  ದಾಳಿಂಬೆ ಬೆಳೆ ಪ್ರದೇಶ ಕುಷ್ಟಗಿ ತಾಲ್ಲೂಕಿನದು ಎಂಬುದು ವಿಶೇಷ. ಅಲ್ಲದೇ ಶೇ 90ರಷ್ಟು ರೈತರು ದಾಳಿಂಬೆಯನ್ನು ಕಿತ್ತುಹಾಕಿರುವುದು ತಿಳಿದುಬಂದಿದೆ.

ಮಾದರಿ ರೈತರು: ತಾಲ್ಲೂಕಿನ ಜಗನ್ನಾಥ ಗೋತಗಿ, ಮಾರುತಿ ಭಜಂತ್ರಿ, ವೀರೇಶ ತುರಕಾಣಿ, ಮರಸಣ್ಣ ತಾಳದ, ತಿರುಮಲರಾಜರೆಡ್ಡಿ, ಶ್ರೀನಿವಾಸ ರೆಡ್ಡಿ ಹೀಗೆ ಇನ್ನೂ ಕೆಲ ರೈತರು ದಾಳಿಂಬೆ ಬೆಳೆಯಲ್ಲಿ ವಿಶ್ವಾಸ ಕಳೆದುಕೊಂಡಿಲ್ಲ. ಅವರ ತೋಟದಲ್ಲೂ ದುಂಡಾಣು ಅಂಗಮಾರಿ ಕಾಟ ಇದೆ. ಆದರೆ ಸಾಕಷ್ಟು ಖರ್ಚು ಮತ್ತು ಪರಿಶ್ರಮದಿಂದಾಗಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವುದು ಕಂಡುಬಂದಿದೆ.

ಉದಾಹರಣೆಗೆ ಪಟ್ಟಣದ ಜಗನ್ನಾಥ ಗೋತಗಿ ಎಳೆಂಟು ಎಕರೆಯಲ್ಲಿನ ಸುಮಾರು ಎರಡು ಸಾವಿರ ಗಿಡಗಳಿಂದ ಕಳೆದ ಒಂಭತ್ತು ವರ್ಷದಿಂದ ಉತ್ತಮ ಬೆಳೆ ಪಡೆದಿದ್ದಾರೆ. ನಾಲ್ಕನೇ ಬೆಳೆಯಲ್ಲಿ ಕನಿಷ್ಟ ರೂ 18 ಲಕ್ಷ ಆದಾಯ ಎಂಬುದನ್ನು ಬಿಟ್ಟರೆ ಉಳಿದ ಐದೂ ಬೆಳೆಗಳಲ್ಲಿನ ನಿವ್ವಳ ಆದಾಯದ ಮೊತ್ತ 28-30ಲಕ್ಷ ದಾಟಿದೆ. ಕಳೆದ ವರ್ಷ ಸುಮಾರು 30 ಟನ್ ಇಳುವರಿ ಪಡೆದು ಕೇಜಿಗೆ ರೂ 160-60ರಂತೆ ಮಾರಾಟ ಮಾಡಿದ್ದರು. ಈ ವರ್ಷ ಸುಮಾರು 50 ಟನ್ ಇಳುವರಿ ನಿರೀಕ್ಷೆ ಇದೆ.

ಸಾಧನೆ ಗುಟ್ಟೇನು?: ದಾಳಿಂಬೆಯನ್ನು ಎಲ್ಲ ರೈತರು ಕಿತ್ತುಹಾಕಿರುವುದರ ನಡುವೆಯೂ ಇಷ್ಟೊಂದು ಸಾಧನೆ ಹಿಂದಿರುವ ಗುಟ್ಟೇನು ಎಂಬುದಕ್ಕೆ ರೈತರ ಜಗನ್ನಾಥ ಗೋತಗಿ ವಿವರಿಸಿದ್ದು ಹೀಗೆ, ಕಡಿಮೆ ಪ್ರದೇಶ ಇದ್ದಷ್ಟು ನಿರ್ವಹಣೆಗೆ ಅನುಕೂಲ. ಸಾವಯವ, ಕೊಟ್ಟಿಗೆ, ಹಂದಿ ಗೊಬ್ಬರಗಳ ಯಥೇಚ್ಛ ಬಳಕೆ. ಜತೆಗೆ ಪೂರಕ ಮತ್ತು ಪೂರಕವಲ್ಲದ ವಾತಾವರಣ ನಡುವೆಯೂ ಅನುಭವಿಗಳ ಮಾರ್ಗದರ್ಶನದಲ್ಲಿ ಕಾಲಕ್ಕೆ ತಕ್ಕಂತೆ ಔಷಧಗಳ ಸಿಂಪರಣೆ, ಉತ್ತಮ ತೋಟಗಳಿಗೆ ಭೇಟಿ ಮುಖ್ಯ. ಎಲ್ಲಕ್ಕಿಂತಲೂ ನಂಬಿಕೆಯುಳ್ಳ ಕೃಷಿ ಕಾರ್ಮಿಕರು ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಅವರ ಅನುಭವ.

ಅಲ್ಲದೇ ಸೆಪ್ಟಂಬರ್ ನಂತರ ಮಳೆಗಾಲ ಕ್ಷೀಣಿಸುವ ಸಂದರ್ಭದಲ್ಲಿ ದಾಳಿಂಬೆಗೆ ಇಥ್ರೈಲ್ ರಾಸಾಯನಿಕ ಸಿಂಪಡಿಸಿ ವಿಶ್ರಾಂತಿ ನೀಡಿದ್ದರಿಂದ ರೋಗಬಾಧೆ ಕಡಿಮೆ ಇರುತ್ತದೆ ಎಂದು ಹೇಳುವ ಅವರು, ದುಂಡಾಣು ಬಾಧಿತ ಗಿಡದಲ್ಲೂ 50-100 ಕಾಯಿಕಟ್ಟಿರುವುದುನ್ನು ತೋರಿಸಿದರು. ಮಾರ್ಚ್ ವೇಳೆಗೆ ದಾಳಿಂಬೆ ಕಟಾವಿಗೆ ಬರಲಿದ್ದು ಜಗನ್ನಾಥ ಫುಲ್‌ಖುಷ್ ಮೂಡ್‌ನಲ್ಲಿದ್ದಾರೆ.

ಇತರೆ ರೈತರು ಇವರ ಮಾದರಿ ಅನುಸರಿಸಬಹುದಾಗಿತ್ತಾದರೂ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡುವಷ್ಟು ಆರ್ಥಿಕ ತಾಕತ್ತು ಎಷ್ಟು ಜನ ಸಾಮಾನ್ಯ ರೈತರಲ್ಲಿದೆ ಎಂಬ ಮಾತು ಕೇಳಿಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.