ADVERTISEMENT

ಲಲಿತಾರಾಣಿ ಸೆಳೆಯಲು ಯತ್ನ

ಗಂಗಾವತಿ: ಬಿಎಸ್‌ಆರ್‌ನಿಂದ ವಿವಿಧ ಪಕ್ಷಗಳ ನಾಯಕರಿಗೆ ಗಾಳ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:14 IST
Last Updated 12 ಡಿಸೆಂಬರ್ 2012, 10:14 IST

ಗಂಗಾವತಿ: ರಾಜ್ಯದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡು ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಶಾಸಕ ಶ್ರೀರಾಮುಲು ನೇತೃತ್ವದಲ್ಲಿನ ಬಿಎಸ್‌ಆರ್ ಕಾಂಗ್ರೆಸ್ ಇದೀಗ ಗಂಗಾವತಿಯ ವಿವಿಧ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಿದೆ.

ಇದರ ಮೊದಲ ಹಂತವಾಗಿ ವಿಜಯನಗರದ ಮೂಲ ರಾಜದಾನಿ ಆನೆಗೊಂದಿಯ ರಾಜ ಮನೆತನಕ್ಕೆ ಸೇರಿದ ಹಾಲಿ ಬಿಜೆಪಿ ಪಕ್ಷದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಯತ್ನ ನಡೆಸಿದೆ.

ಬಿಎಸ್‌ಆರ್ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕಂಪ್ಲಿಯ ಶಾಸಕ ಸುರೇಶ ಬಾಬು ಸೋಮವಾರ ಲಲಿತಾರಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದರು.ಆದರೆ ರಾಜಕೀಯ ಉದ್ದೇಶಿತ ಭೇಟಿಗೆ `ಸೌಜನ್ಯದ ರೂಪ' ನೀಡಲಾಯಿತು

ಕಾಂಗ್ರೆಸ್ ಮೂಲ:ರಾಜ ಮನೆತನಕ್ಕೆ ಸೇರಿದ ಶ್ರೀರಂಗದೇವರಾಯಲು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಹಿಂದೆ ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಮ್ಮೆ ಸಚಿವರಾಗಿಯೂ ಆಯ್ಕೆಯಾಗಿದ್ದರು.

ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪಕ್ಷದ ಬಲವೃದ್ಧಿಗೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕೈ ಹಾಕಿದರು. ಅದರ ಫಲವಾಗಿಯೇ ಕಾಂಗ್ರೆಸ್‌ನಲ್ಲಿದ್ದ ರಂಗದೇವರಾಯಲು ಅವರ ಪತ್ನಿ ಲಲಿತಾರಾಣಿ ಅವರನ್ನು ಶ್ರೀರಾಮುಲು ಬಿಜೆಪಿಗೆ ಕರೆತಂದರು.

ಆಗ ಬಿಜೆಪಿ, ಈಗ ಬಿಎಸ್‌ಆರ್?: ಬಿಜೆಪಿಗೆ ಸೇರುವ ಮುನ್ನ ಲಲಿತಾರಾಣಿ ಅವರಿಗೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಬಗ್ಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಭರವಸೆ ನೀಡಿ ಬಿಜೆಪಿಗೆ ಸೇರಿಸಿಕೊಂಡಿದ್ದರು.

ಆದರೆ ಬಿಜೆಪಿಯಲ್ಲಿನ ಗೊಂದಲಗಳಿಂದಾಗಿ ನಾಮ ನಿರ್ದೇಶನ ಕೈಗೆಟಕದಾದಾಗ ಲಲಿತಾರಾಣಿ ಅವರನ್ನು ಸಮಾಧಾನ ಪಡಿಸಲು ಕಾಟಾಚಾರಕ್ಕೆ ಎಂಬಂತೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ಸರ್ಕಾರ ನೇಮಿಸಿತು.

ಬಿಜೆಪಿ ಈ ಹಿಂದೆ `ಕೊಟ್ಟ ಭರವಸೆ ಈಡೇರಿಸಿಲ್ಲ' ಎಂಬ ನೆಪ ಮುಂದಿಟ್ಟುಕೊಂಡು ಬಿಎಸ್‌ಆರ್ ಪಕ್ಷವು ಲಲಿತಾರಾಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ `ಮಹಿಳಾ ಬಲ' ವೃದ್ಧಿಸಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ.
`ಕೊಟ್ಟ ಭರವಸೆ ಈಡೇರಿಸಿಲ್ಲ' ಎಂಬ ಅಸಮಾಧಾನದಲ್ಲಿರುವ ಲಲಿತಾರಾಣಿ, ಈ ಬಾರಿ ಶತಗತ ಬಿಜೆಪಿ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದೊಮ್ಮೆ ಟಿಕೆಟ್ ಸಿಗದಿದ್ದಲ್ಲಿ ಆಗ ಬಿಜೆಪಿ, ಈಗ ಬಿಎಸ್‌ಆರ್ ಅನಿವಾರ್ಯ ಎಂಬ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.