ಗಂಗಾವತಿ: ರೈತರಿಂದ ಸುಮಾರು 1.50 ಕೋಟಿ ರೂಪಾಯಿ ಮೊತ್ತದ ಬತ್ತ ಕೊಂಡ ವರ್ತಕನೊಬ್ಬ ದಿಢಿರ್ ಕಾಣೆಯಾದ್ದರಿಂದ ಕಂಗಾಲಾದ ರೈತರು, ಹಣ ಕೊಡಿಸುವಂತೆ ಒತ್ತಾಯಿಸಿ ವಿಷ ಸೇವನೆಗೆ ಮುಂದಾದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.
ನಂಬಿಕೆಯಿಂದ ವರ್ತಕನಿಗೆ ಬತ್ತ ನೀಡಿ ಇದೀಗ ವಂಚನೆಗೊಳಗಾದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸುತ್ತಲಿನ ಹಾಗೂ ಗಂಗಾವತಿ ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು 40ಕ್ಕೂ ಹೆಚ್ಚು ರೈತರು ವರ್ತಕನ ಅಂಗಡಿಯ ಮುಂದೆ ಗುರುವಾರ ರಾತ್ರಿಯಿಂದಲೇ ಧರಣಿ ನಡೆಸಿದರು.
ಆದರೆ ಸಂಬಂಧಿತ ಇಲಾಖೆಯ ಯಾವ ಅಧಿಕಾರಿಗಳು ರಾತ್ರಿ ರೈತರ ಸಮಸ್ಯೆ ಆಲಿಸಲು ಆಗಮಿಸಲಿಲ್ಲ. ಹೀಗಾಗಿ ರೈತರು ದಲ್ಲಾಳಿಯ ಅಂಗಡಿ ಆವರಣದಲ್ಲಿಯೇ ಇಡೀ ರಾತ್ರಿ ಕಳೆದರು. ಶುಕ್ರವಾರ ಬೆಳಗಿನಿಂದ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಸುದ್ದಿಗಾರರ ಮುಂದೆ ಕೆಲ ರೈತರು ತಮ್ಮ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಒಂದಿಬ್ಬರು ವಿಷ ಸೇವನೆಗೂ ಮುಂದಾದ ಘಟನೆಯೂ ನಡೆಯಿತು. ಕೊಟ್ಟಾಲ್ ಗ್ರಾಮದ ರೈತ ಸುಬ್ಬಾರಾವ್ ಮಾತನಾಡಿ, `ನಗರದ ಶಂಕರ್ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಮಾಲೀಕ ಕೆ.ಬಸವರಾಜ ಎಂಬುವವರು ನಮ್ಮಿಂದ ಸುಮಾರು 10 ಸಾವಿರ ಚೀಲ ಬತ್ತ ಖರೀದಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಹಣ ನೀಡುತ್ತೇನೆ ಎಂದು ಭರವಸೆ ನೀಡುತ್ತಾ ಬಂದಿರುವ ಬಸವರಾಜ ಕಳೆದ ಎರಡು ದಿನಗಳಿಂದ ಏಕಾಏಕಿ ನಾಪತ್ತೆಯಾಗಿದ್ದಾರೆ. ಎಪಿಎಂಸಿ ಮಧ್ಯಸ್ಥಿಕೆ ವಹಿಸಿ ನಮ್ಮ ಹಣ ಕೊಡಿಸಬೇಕು' ಎಂದು ಒತ್ತಾಯಿಸಿದರು.
ಗಾಜನೂರು, ದೇವಸಮುದ್ರ, ಜಮಾಪುರ, ಕಂಪ್ಲಿ, ಗೋನಾಳ, ನೆಲ್ಲುಡಿ, ಕೃಷ್ಣಪುರ, ಹಿರೇಜಂತಕಲ್ ಗ್ರಾಮದ ರೈತರಾದ ಶ್ರೀನಿವಾಸ, ಬಸಪ್ಪ ಮುಸ್ಟೂರು, ಭಾಸ್ಕರ, ದಡಿಯಪ್ಪ, ವೆಂಕೋಬ, ಲಿಂಗಪ್ಪ, ವಿರುಪಾಕ್ಷಗೌಡ, ಬಸವರಾಜ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.