ADVERTISEMENT

ವರುಣ ಕೃಪೆಗೆ ಸ್ಥಳೀಯರ ಗಂಗೆಪೂಜೆ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 9:45 IST
Last Updated 21 ಜುಲೈ 2012, 9:45 IST
ವರುಣ ಕೃಪೆಗೆ ಸ್ಥಳೀಯರ ಗಂಗೆಪೂಜೆ!
ವರುಣ ಕೃಪೆಗೆ ಸ್ಥಳೀಯರ ಗಂಗೆಪೂಜೆ!   

ಯಲಬುರ್ಗಾ: ವರುಣನ ಕೃಪೆಗಾಗಿ ಸ್ಥಳೀಯ ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಗೋಪೂಜೆ, ಗುರ್ಜಿಪೂಜೆ, ಗಂಗೆಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಅನೇಕ ಗಣ್ಯರು, ಮುಖಂಡರು, ಯುವಕರು ಹಾಗೂ ವಿವಿಧ ಮಹಿಳಾ ಸಂಘದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಶುಕ್ರವಾರ ಅದ್ಧೂರಿಯಾಗಿ ಆಚರಿಸಿದರು. 

ಸದ್ರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಂದನೇ ವಾರ್ಡಿನಲ್ಲಿರುವ ಪುರಾತನ ಕೊಂಡದಬಾವಿಯಲ್ಲಿ ಗಂಗೆಪೂಜೆ ನೆರವೇರಿಸಿ ಅಲ್ಲಿಂದ ಮುತ್ತೈದೆಯರು ಹೊತ್ತು ತಂದ ನೀರಿನಿಂದ ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಗುರ್ಜಿಪೂಜೆ ಮತ್ತು ಗೋವುಗಳ ಪೂಜೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ನೇತೃತ್ವವಹಿಸಿದ್ದ ಶ್ರೀಧರಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಸೌಭಾಗ್ಯ ಹಾಗೂ ಸಮೃದ್ಧಿಯ ಸಂಕೇತವಾದ ಗೋಪೂಜೆಯನ್ನು ಈ ಹಿಂದೆ ಪ್ರತಿಯೊಂದು ಕುಟುಂಬದಲ್ಲಿ ಪ್ರತಿನಿತ್ಯ ಸಂಭ್ರಮದಿಂದಲೇ ಕೈಗೊಳ್ಳುತ್ತಿದ್ದರು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ನೋಡಲು ಸಿಗದ ಸ್ಥಿತಿಯಲ್ಲಿದ್ದು ಅವನತಿಯತ್ತ ಸಾಗುತ್ತಿವೆ. ಗೋಸಂತತಿಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ.

ಇದೇ ಧೋರಣೆ ಹೀಗೆ ಮುಂದುವರೆದರೆ ಗೋವು ಅಪರೂಪದ ಪ್ರಾಣಿ ಯಾಗಿ ಗುರುತಿಸಿಕೊಳ್ಳುವುದರಿಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಗೋಸಂರಕ್ಷಣೆ ಆಂದೋಲನ ರೂಪದಲ್ಲಿ ನಡೆಯಬೇಕಾಗಿದೆ. ಗೋಪೂಜೆಯಿಂದ ಅನೇಕ ದೋಷಗಳು ನಿವಾರಣೆಯಾಗುವುದು ಸತ್ಯ ಸಂಗತಿಯಾಗಿದೆ. ಬಹುಪಯೋಗಿ ಪ್ರಾಣಿ ಎಂದೇ ಕರೆಯಿಸಿಕೊಳ್ಳುತ್ತಿರುವ ಗೋವುಗಳನ್ನು ಪೂಜಿಸುವುದು ಬರಗಾಲ ನಿಯಂತ್ರಣಕ್ಕೆ ಹೆಚ್ಚಿನ ಪರಿಣಾಮಕಾರಿ ಎಂದರು.

ಪಪಂ ಅಧ್ಯಕ್ಷ ಸುರೇಶಗೌಡ ಶಿವನಗೌಡ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ, ಪಶು ವೈದ್ಯಾಧಿಕಾರಿ ಅನಂತ. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಗೋಪೂಜೆಯಿಂದ ಪ್ರತಿಯೊಬ್ಬ ಮನುಷ್ಯ ನೆಮ್ಮದಿ, ಸುಖ-ಶಾಂತಿ ತಂದುಕೊಳ್ಳಬಹುದು, ಆದರೆ ಮುಖ್ಯವಾಗಿ ಮಳೆಯ ಕೊರತೆಗೆ ಮೂಲ ಕಾರಣವನ್ನು ಕಂಡುಕೊಂಡು ಅವುಗಳ ನಿವಾರಣೆಗೆ ಪ್ರತಿಯೊಬ್ಬರು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಹೆಚ್ಚೆಚ್ಚು ಸಸಿಗಳನ್ನು ನೆಡುವುದು ಮತ್ತು ಮರಗಳನ್ನು ಸಂರಕ್ಷಿಸುವುದು, ಕೆರೆಗಳನ್ನು ಹಾಳು ಮಾಡದೇ ಸಂರಕ್ಷಿಸುವುದು, ಲಭ್ಯವಿರುವ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದು, ಹೊಲ ಗದ್ದೆಗಳಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸುವುದು ಹೀಗೆ ಪರಿಸರಕ್ಕೆ ಪೂರಕವಾಗುವ ಕಾರ್ಯಚಟುವಟಿಕೆಯಲ್ಲಿ ತೊಡಗುವ ಮೂಲಕ ನೀರಿನ ಕೊರತೆಯನ್ನು ನೀಗಿಸಿಕೊಳ್ಳಬಹುದಾಗಿದೆ ಎಂದು ನುಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರಪ್ಪ ಕಲಬುರ್ಗಿ ಹಾಗೂ ಈಶಪ್ಪ ಶೆಟ್ಟರ್, ವರ್ತಕರಾದ ಸಂಗಪ್ಪ ಕರೆಂಡಿ, ಸಂಗಣ್ಣ ತೆಂಗಿನಕಾಯಿ, ಶೇಖರಗೌಡ ಉಳ್ಳಾಗಡ್ಡಿ, ನಾಗನಗೌಡ ಓಜನಹಳ್ಳಿ, ಮಂಜುನಾಥ ಅಧಿಕಾರಿ, ಅಶೋಕ ಕುರುವಿನಶೆಟ್ಟಿ, ತಿಪ್ಪಣ್ಣ ತಳಕಲ್ಲ, ಕೆ.ಜಿ. ಪಲ್ಲೇದ ಇತರರು ಇದ್ದರು. ಕೆ.ಎನ್. ಮುಳಗುಂದ ನಿರೂಪಿಸಿ ವಂದಿಸಿದರು.

ಮೇವು ವಿತರಣೆ: ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದ್ದರಿಂದ ರೈತರಿಗೆ ಉಚಿತವಾಗಿ ವಿತರಿಸಲು ಸ್ಥಳೀಯ ವರ್ತಕ ಸಂಗಣ್ಣ ತೆಂಗಿನಕಾಯಿ ಎರಡು ಲಾರಿ ಮೇವು ಕೊಡುಗೆಯಾಗಿ ನೀಡಿದರು. ಪ್ರಸಾದದ ಮಾದರಿಯಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ರೈತರಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.