ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:43 IST
Last Updated 9 ಜನವರಿ 2014, 6:43 IST

ಕೊಪ್ಪಳ: ಅಡುಗೆ ಅನಿಲ ಹಾಗೂ ಆಟೋರಿಕ್ಷಾಗಳಿಗೆ ಬಳಸುವ ಎಲ್‌ಪಿಜಿ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಅಶೋಕ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಈಗಾಗಲೇ ಹಲವಾರು ಬಾರಿ ಅಡುಗೆ ಅನಿಲ ಬೆಲೆ ಏರಿಸಿರುವ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯನ ಬದುಕನ್ನು ದುರ್ಬರವಾಗಿಸಿದೆ. ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿ, ಇಂಧನ ಬೆಲೆಏರಿಕೆಯ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿದೆ. ಬೆಲೆ ಏರಿಸುವುದನ್ನೇ ಚಾಳಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ಸಂಪೂರ್ಣ ಕಡೆಗಣಿಸಿದೆ ಎಂದು ದೂರಿದರು.

ಇದಕ್ಕೂ ಮುನ್ನ ಅಡುಗೆ ಅನಿಲ ಸಿಲಿಂಡರ್‌ ಮಿತಿಯನ್ನು 9ಕ್ಕೆ ಇಳಿಸಿರುವುದರಿಂದ ಹೆಚ್ಚುವರಿ ಸಿಲಿಂಡರ್‌ ಪಡೆಯಲೂ ಜನ ಪರದಾಡು ವಂತಾಗಿದೆ. ಇತ್ತ ಬಡವರು ಆಟೋರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಅನಿಲ ಬೆಲೆ ಏರಿಕೆಯಿಂದ ಅವರ ಜೀವನಕ್ಕೂ ತೊಂದರೆಯಾ ಗಿದೆ. ಬಡ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ ಎಂದರು.

ತಕ್ಷಣವೇ ಏರಿಸಿರುವ ಅನಿಲ ಬೆಲೆ ಇಳಿಸಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಜನ ಸಾಮಾನ್ಯರ ಸಂಕಷ್ಟಕ್ಕೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಪಕ್ಷ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕರಡಿ ಸಂಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ ನಾಯಕ್‌, ಲೋಕಸಭಾ ಸದಸ್ಯ ಶಿವರಾಮ ಗೌಡ, ಹಿರಿಯ ಮುಖಂಡ ಅನ್ವರ್‌ ಮಾನ್ಪಡೆ, ವಕ್ತಾರ ಚಂದ್ರಶೇಖರ ಹಲಗೇರಿ, ಚಂದ್ರಶೇಖರ ಕವಲೂರು, ಗುರು ನಾಯಕ, ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು.

ಸೆಮಿಸ್ಟರ್‌ ಪದ್ಧತಿಗೆ ವಿರೋಧ
ಗಂಗಾವತಿ: ವೃತ್ತಿ ಶಿಕ್ಷಣ ತರಬೇತಿ (ಐಟಿಐ) ಶಿಕ್ಷಣದಲ್ಲಿ ಸೆಮಿಸ್ಟರ್‌ ಪದ್ಧತಿ ಜಾರಿ ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಎಸ್‌ಎಫ್‌ಐ ಸಂಘಟನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿವಿಧ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಹಳೆಯ ಪ್ರವಾಸಿಮಂದಿರದಲ್ಲಿ ಸಭೆ ಸೇರಿದ ವಿದ್ಯಾರ್ಥಿಗಳು ಬಳಿಕ ಕೇಂದ್ರ ಬಸ್‌ ನಿಲ್ದಾಣದ ಎದುರಿನ ಕೃಷ್ಣದೇವರಾಯ ವೃತ್ತದಿಂದ ಸಿಬಿಎಸ್‌ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಬಳಿಕ ಸಿಬಿಎಸ್‌ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಹಂತಹಂತವಾಗಿ ಶಿಕ್ಷಣವನ್ನು ಖಾಸಗೀಕರಣ ಮಾಡುವ ಯೋಜನೆ ಹಮ್ಮಿಕೊಂಡಿದೆ. ಇದು ಬಡ ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಯತ್ನ’ ಎಂದರು.

ಐಟಿಐ ಶಿಕ್ಷಣದಲ್ಲಿ ಸೆಮಿಸ್ಟರ್‌ ಜಾರಿ ಮಾಡಿದರೆ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪದ್ಧತಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಗ್ಯಾನೇಶ ಕಡಗದ, ಮಂಜುನಾಥ, ನಾಗರಾಜ, ಲಾಲ್‌ಸಾಬ, ಮರಿನಾಗ, ಶಿವು, ಅವಿನಾಶ, ವಿರೂಪಾಕ್ಷಿ, ಸಾಯಿನಾಥ, ಅಬುಸಮದ್‌, ಹಂಪಣ್ಣ, ರಾಜು ಇದ್ದರು. ಜೆಎಸ್‌ಎಸ್‌, ನಾರಾಯಣಸ್ವಾಮಿ ಸೇರಿ 400ಕ್ಕೂ ಹೆಚ್ಚು ಐಟಿಐ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶುಲ್ಕ ಹೆಚ್ಚಳ: ಪ್ರತಿಭಟನೆ
ಕುಕನೂರು: ಪಿಯು ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಇಲ್ಲಿನ ವಿದ್ಯಾನಂದ ಗುರುಕುಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ನಗರ ಸಂಚಾಲಕ ಜಗದೀಶ ಜವಳಿ ಮಾತನಾಡಿ, ಸರ್ಕಾರ ಕಳೆದ ಬಾರಿ ಶುಲ್ಕ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಹೊರೆಯಾಗಿಸಿದೆ. ಇದರಿಂದ ಬಡ ಕುಟುಂಬದ ವಿದ್ಯಾರ್ಥಿಗಳು ವ್ಯಾಸಂಗ ನಿಲ್ಲಿಸಿದ್ದಾರೆ. ಹೀಗಿದ್ದರೂ ಸರ್ಕಾರ ಈಗ ಮತ್ತೊಮ್ಮೆ ಶುಲ್ಕ ಹೆಚ್ಚಿಸಿದೆ. ಇದು ಖಂಡನೀಯ ಎಂದರು.

ಶುಲ್ಕದ ಹೆಚ್ಚಳ ಆದೇಶ ಹಿಂಪಡೆಯಬೇಕು. ಜತೆಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಉಚಿತ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ ರಾಜ್ಯ ದಾದ್ಯಂತ ಹೋರಾಟ ಮಾಡಲಾಗುವುದು ಎಂದರು.

ಎಸ್‌ಎಫ್‌ಐ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಬೆಣಕಲ್‌, ಗೌರವಾಧ್ಯಕ್ಷ ಅಶೋಕ ನಿಡಗುಂದಿ, ಸದಸ್ಯ ಶ್ರೀಕಾಂತ ಛಲವಾದಿ, ಸುಭಾಷ ಹಟ್ಟಿ, ಸಾಗರ ಭಂಡಾರಿ, ಮಂಜುನಾಥ ಪ್ರಸಾದ, ಬಸವರಾಜ ಮ್ಯಾಗಳ ಮನಿ, ಅಮರೇಶ ಹುಚನೂರು, ಯಲ್ಲಪ್ಪ ಸಂದಿಮನಿ, ಅಭಿಷೇಕ ಗೊರ್ಲೆಕೊಪ್ಪ, ಸಂಗೀತಾ ಆರಬೆರಳಿನ, ಪ್ರಮೀಳಾ ಆರಬೆರಳಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.