ADVERTISEMENT

ವೃತ್ತಿ ಶಿಕ್ಷಣ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 7:55 IST
Last Updated 11 ಏಪ್ರಿಲ್ 2012, 7:55 IST

ಕೊಪ್ಪಳ: ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಶುಲ್ಕದಲ್ಲಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸಿದ್ಧಲಿಂಗೇಶ್ವರ ಐಟಿಐ ಸಂಸ್ಥೆಯಿಂದ ತಹಸೀಲ್ದಾರ ಕಚೇರಿ ವರೆಗೆ ಮೆರವಣಿಗೆ ನಡೆಸಿ ನಂತರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿರಾದಾರ್, ಪ್ರಸಕ್ತ ವರ್ಷ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಶೇ 10ರಷ್ಟು ಹೆಚ್ಚಿಸಿರುವುದು ಸರಿಯಲ್ಲ ಎಂದು ದೂರಿದರು.

ಪ್ರತಿ ವರ್ಷ ರಾಜ್ಯ ಸರ್ಕಾರ ಖಾಸಗಿ ಆಡಳಿತ ಮಂಡಳಿಗಳ ಲಾಬಿಗೆ ಮಣಿಯುತ್ತಿದೆ. ಶುಲ್ಕ ಮತ್ತು ಸೀಟುಗಳ ಹಂಚಿಕೆ ಸಂದರ್ಭದಲ್ಲಿ ರಾಜ್ಯದ ಶಿಕ್ಷಣತಜ್ಞರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಪೋಷಕರು ಮತ್ತು  ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿಟ್ಟು ಕೇವಲ ಖಾಸಗಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತಿದೆ ಎಂದು ದೂರಿದರು.

ಕೂಡಲೇ ಶುಲ್ಕ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕು.ಕಾಮೆಡ್‌ಕೆ ಅನ್ನು ರದ್ದುಗೊಳಿಸಿ ಸರ್ಕಾರವೇ ಸಂಪೂರ್ಣ  ಕೌನ್ಸಿಲಿಂಗ್ ನಡೆಸಬೇಕು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಸಿಇಟಿಯನ್ನು ಸಹ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ನಗರ ಕಾರ್ಯದರ್ಶಿ ಗವಿಸಿದ್ದಪ್ಪ ಜಂತಕಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಮಿತ್ ಕಂಪ್ಲಿಕರ್, ಮಂಜುನಾಥ, ಶರಣಪ್ಪ, ರವಿಕುಮಾರ್, ವಿಶ್ವನಾಥ, ಸಂಗಮೇಶ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.