ADVERTISEMENT

ಶಾಲಾ ಮುಖ್ಯದ್ವಾರದಲ್ಲೇ ತರಕಾರಿ ಹರಾಜು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:44 IST
Last Updated 7 ಡಿಸೆಂಬರ್ 2013, 6:44 IST

ಹನುಮಸಾಗರ: ಇಲ್ಲಿನ ಹಳೆಬಸ್‌ ನಿಲ್ದಾಣದ ಸಮೀಪವಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇರುವ ಪ್ರವೇಶದ್ವಾರದಲ್ಲಿ ತರಕಾರಿ ಹರಾಜು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.

ಶಾಲೆಯ ಮುಂಭಾಗದಲ್ಲಿಯೇ ಮುಖ್ಯ ಮಾರುಕಟ್ಟೆ ಇರುವುದು ಹಾಗೂ ಶಾಲೆಯ ಎಡಬಲದಲ್ಲಿ ವ್ಯಾಪಾರ ಮಳಿಗೆಗಳು ತಲೆ ಎತ್ತಿರು­ವುದು ಹಾಗೂ ವಾಹನಗಳ ಕಿರಿಕಿರಿ ಅನುಭವಿಸುತ್ತಿರುವ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲಾ ಪ್ರವೇಶದ್ವಾರ ದಾಟಿಕೊಂಡು ಬರಲು ಸಾಧ್ಯವಾಗದೆ ಬಾಗಿಲು ಏರಿ, ತರಕಾರಿ ಬುಟ್ಟಿಗಳನ್ನು ದಾಟಿಕೊಂಡು, ಇಲ್ಲವೆ ಸಂದಿಗೊಂದುಗಳನ್ನು ಹುಡುಕಿ­ಕೊಂಡು ಶಾಲೆಯನ್ನು ಪ್ರವೇಶಿಸು­ವುದು ನಿತ್ಯ ಸಾಮಾನ್ಯ ಸಂಗತಿಯಾಗಿದೆ.

ಪ್ರತಿ ದಿನ ಬೆಳಿಗ್ಗೆ ನಡೆಯುವ ಈ ಚಟುವಟಿಕೆ ಸಾಮಾನ್ಯವಾಗಿ ಶಾಲಾ ಆರಂಭದಲ್ಲಿ ಮುಗಿದಿರುತ್ತದೆ. ಆದರೆ ಶನಿವಾರ ಮಾತ್ರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಎಲ್ಲ ಬುಟ್ಟಿ­ಗಳನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ ಇದೆ ಎಂದು ದೂರಲಾಗಿದೆ.

ಮಕ್ಕಳ ಸ್ಥಿತಿ ನೋಡಿದಾಗ ನಮಗೂ ನೋವಾಗುತ್ತದೆ, ನಮಗೆ ಹರಾಜು ಮಾಡುಲು ಎಲ್ಲೂ ಸ್ಥಳವಿಲ್ಲದಂತಾ­ಗಿದೆ ಶಾಲೆ ಆರಂಭವಾಗುವ ಮುಂಚೆ ವಹಿವಾಟು ಮುಗಿಸುತ್ತಿದ್ದೇವೆ, ತರಕಾರಿ ಹರಾಜು ನಡೆಸಲು ಒಂದು ಸೂಕ್ತ ಸ್ಥಳ ಸೂಚಿಸಿ ಎಂದು ಪಂಚಾಯಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವ್ಯಾಪಾ­ರಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಹಲವು ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬಂದಿದೆ. ಆದಾಗ್ಯೂ ಯಾವುದೇ ಜನಪ್ರತಿನಿಧಿಗಳು ಈ ಸಮಸ್ಯೆಯತ್ತ ದೃಷ್ಟಿ ಹರಿಸದಿರುವುದು ವಿಪರ್ಯಾಸವಾಗಿದೆ. ತರಕಾರಿ ಹರಾಜು ಪ್ರಕ್ರಿಯೆಯನ್ನು ಶಾಲೆ ಆವರಣದಿಂದ ಬೇರೆ ಸ್ಥಳದಲ್ಲಿ ನಡೆಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಗ್ರಾಮ ಪಂಚಾ­ಯಿತಿಯನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.