ADVERTISEMENT

ಶಾಲಾ ಮೈದಾನಕ್ಕೆ ನುಗ್ಗಿದ ನೀರು: ಪರದಾಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:20 IST
Last Updated 19 ಜುಲೈ 2012, 9:20 IST

ಕುಕನೂರು: ಇಲ್ಲಿಯ ವಿದ್ಯಾನಗರದ ಸರ್ಕಾರಿ ಮಾಧ್ಯಮಿಕ ಶಾಲೆಯ ಮೈದಾನದ ಒಳಗೆ ಮಳೆಯ ನೀರು ನುಗ್ಗಿದ್ದರಿಂದ ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ ದೃಶ್ಯ ಮಂಗಳವಾರ ಕಂಡುಬಂತು.

ಗ್ರಾಮ ಪಂಚಾಯತಿ ಸುವರ್ಣ ಗ್ರಾಮ ಯೋಜನೆ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಇದುವರೆಗೂ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿದೆ. ಆದರೆ ಯಾವುದೇ ಕಾಮಗಾರಿಗಳು ಸಮರ್ಪಕವಾಗಿ ಆಗದ ಕಾರಣದಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದ್ದಕ್ಕೆ ಇದೊಂದು ತಾಜಾ ನಿದರ್ಶನ.

ವಿದ್ಯಾನಗರ, ರಾ.ಭಿ.ದೇಸಾಯಿ ನಗರ, ಮಹಾಮಾಯಾ ಕಾಲೊನಿ, ದ್ಯಾಂಪೂರ ಭಾಗದ ಬಹುತೇಕ ಮಳೆಯ ನೀರು ಇದೇ ಭಾಗಕ್ಕೆ ಹರಿದು ಬರುತ್ತದೆ. ಎತ್ತರ ಪ್ರದೇಶದ ಮಳೆಯ ನೀರು ವಿದ್ಯಾನಗರದೊಳಗೆ ನುಗ್ಗುವುದನ್ನು ತಪ್ಪಿಸಲು ಆರೇಳು ವರ್ಷದಿಂದ ಗ್ರಾಮ ಪಂಚಾಯತಿ ಹಲವಾರು ಕಾಮಗಾರಿಯನ್ನು ಕೈಗೆತ್ತಿಗೊಂಡಿದೆ.

ಕೈಗೆತ್ತಿಕೊಂಡ ಕಾಮಗಾರಿಗಳು `ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ~ ಎನ್ನುವಂತಾಗಿದ್ದರಿಂದ ಮಳೆ ಬಂದಾಗ ವಿದ್ಯಾನಗರದ ಕೆಳಭಾಗದ ನಿವಾಸಿಗಳು ಹಾಗೂ ಇದೇ ಪ್ರದೇಶದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.

ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿ ಶಾಲಾ ಆವರಣದ ಸುತ್ತಲೂ ತಡೆಗೋಡೆ ಕಟ್ಟಿದೆ. ಆದರೆ ಕೊಳಚೆ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಉತ್ತಮ ಚರಂಡಿ ನಿರ್ಮಿಸದ ಕಾರಣದಿಂದ ಶಾಲಾ ಆವರಣದಲ್ಲಿ ಮೊಣಕಾಲಿನ ವರೆಗೂ ನೀರು ಜಮಾ ಆಗುವಂತಾಗಿದೆ.

ಮೈದಾನವನ್ನು ದುರಸ್ತಿಗೊಳಿಸಲು ಯುವಜನ ಮತ್ತು ಕ್ರೀಡಾ ಇಲಾಖೆ `ಪೈಕಾ~ ಯೋಜನೆಯಲ್ಲಿ 2010-11ನೇ ಸಾಲಿನಲ್ಲಿ ರೂಪಾಯಿ ಒಂದು ಲಕ್ಷ ಹಣ ಮಂಜೂರಿ ಮಾಡಿ ಗ್ರಾಮ ಪಂಚಾಯತಿಗೆ ಜಮಾ ಮಾಡಿದೆ. ಎರಡು ವರ್ಷ ಗತಿಸಿದರೂ ಕಾಮಗಾರಿ ಆರಂಭಿಸದೇ ಇರುವುದು ಸಂಶಯ ಮೂಡಿಸಿದೆ. ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ `ನಿರ್ಮಿತಿ ಕೇಂದ್ರ~ ಹಣವನ್ನು ಪಡೆಯಲು ಹರಸಾಹಸ ಮಾಡುತ್ತಿದೆಯೋ ಹೊರತು ಮೈದಾನ ದುರಸ್ತಿಗೊಳಿಸಲು ಹಿಂದೇಟು ಹಾಕುತ್ತಿದೆ.

ಗ್ರಾಮ ಪಂಚಾಯತಿ ಮತ್ತು ನಿರ್ಮಿತಿ ಕೇಂದ್ರದ ಹಠಮಾರಿ ಧೋರಣೆಯೇ ಇದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ. ಸಂಬಂಧಿಸಿದ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಸಮಸ್ಯೆಯನ್ನು ತುರ್ತಾಗಿ ನಿವಾರಿಸಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪಾಲಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.