ಕನಕಗಿರಿ: ದಲಿತ ಸಮುದಾಯದವರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವೆ ಮೂಲ ಮಂತ್ರ ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.
ಸ್ಥಳೀಯ ಚೆಲುವಾದಿ ವಾರ್ಡ್ ನಲ್ಲಿ ಗುರುವಾರ ರಾತ್ರಿ ಡಾ. ಬಿ. ಆರ್. ಅಂಬೇಡ್ಕರ್ ಯುವಕ ಸಂಘ ಮಹಾಶಿವರಾತ್ರಿ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪಡೆಯುವ ಮೂಲಕ ದಲಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ, ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಇನ್ನೂ ದಲಿತರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅವರು ಹೇಳಿದರು. ಅಂಬೇಡ್ಕರ್ ಕೇವಲ ದಲಿತ ಸಮುದಾಯದವರ ನಾಯಕ ಅಲ್ಲ, ಇಡೀ ರಾಷ್ಟ್ರದ ನಾಯಕ ಎಂದು ಅವರು ಬಣ್ಣಿಸಿದರು.
ತಾ.ಪಂ. ಮಾಜಿ ಸದಸ್ಯ ನೂರುಸಾಬ ಗಡ್ಡಿಗಾಲ ಮಾತನಾಡಿ ಶ್ರೀಮಂತಿಕೆ, ಅಧಿಕಾರಕ್ಕಿಂತ ಶಿಕ್ಷಣ ಮುಖ್ಯವಾಗಿದೆ ಎಂದರು.
ಜಿ.ಪಂ. ಸದಸ್ಯ ಗಂಗಣ್ಣ ಸಮಗಂಡಿ, ಎಪಿಎಂಸಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಉಪನ್ಯಾಸಕ ಡಾ. ಡಿ. ಕೆ. ಮಾಳೆ, ಮುಖಂಡ ಬಿ. ಕನಕಪ್ಪ, ಪತ್ರಕರ್ತ ಮೆಹಬೂಬ ಹುಸೇನ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ನಾಯಕ, ಸದಸ್ಯರಾದ ಸಣ್ಣ ಕನಕಪ್ಪ, ಮಲ್ಲಮ್ಮ ಬಸರಿಗಿಡದ, ದಲಿತ ಮುಖಂಡರಾದ ಹುಸೇನಪ್ಪ ಅರಳಿಗನೂರು, ಹನುಮಂತಪ್ಪ ಮೇಸ್ತ್ರಿ, ಪರಸಪ್ಪ ಗ್ಯಾಂಗಮನ್, ಪಂಪಾಪತಿ ಜಾಲಿಹಾಳ, ಸಂಘದ ಅಧ್ಯಕ್ಷ ಹನುಮೇಶ ಚೆಲುವಾದಿ, ನೀಲಕಂಠ ಬಡಿಗೇರ ಇತರರು ಇದ್ದರು. ಶಿಕ್ಷಕ ನಾಗೇಶ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.