ADVERTISEMENT

ಶಿಲಾನ್ಯಾಸ ಸಮಾರಂಭಕ್ಕೆ ಕಲಾಲಬಂಡಿ ಸಜ್ಜು

ಕೊಪ್ಪಳ ಏತ ನೀರಾವರಿ, ಜನರಲ್ಲಿ ಹರ್ಷದ ಹೊನಲು

​ಪ್ರಜಾವಾಣಿ ವಾರ್ತೆ
Published 23 ಜನವರಿ 2013, 10:44 IST
Last Updated 23 ಜನವರಿ 2013, 10:44 IST
ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಗ್ರಾಮದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಡೆಲಿವರಿ ಚೇಂಬರ್ ನಿರ್ಮಾಣಗೊಳ್ಳಲರುವ ಸ್ಥಳದಲ್ಲಿ ಶಿಲಾನ್ಯಾಸಕ ಫಲಕ ನಿರ್ಮಾಣಕ್ಕೆ ಕಾರ್ಮಿಕರು ಅಂತಿಮ ಸ್ಪರ್ಶ ನೀಡುತ್ತಿರುವುದು ಮಂಗಳವಾರ ಕಂಡುಬಂದಿತು
ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಗ್ರಾಮದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಡೆಲಿವರಿ ಚೇಂಬರ್ ನಿರ್ಮಾಣಗೊಳ್ಳಲರುವ ಸ್ಥಳದಲ್ಲಿ ಶಿಲಾನ್ಯಾಸಕ ಫಲಕ ನಿರ್ಮಾಣಕ್ಕೆ ಕಾರ್ಮಿಕರು ಅಂತಿಮ ಸ್ಪರ್ಶ ನೀಡುತ್ತಿರುವುದು ಮಂಗಳವಾರ ಕಂಡುಬಂದಿತು   

ಕುಷ್ಟಗಿ: ಕೊಪ್ಪಳ ಏತ ನೀರಾವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಕಲಾಲಬಂಡಿಯಲ್ಲಿ ಗುದ್ದಲಿಪೂಜೆ, ಅಡಿಗಲ್ಲು ಹಾಕುವ ಮೂಲಕ ಯೋಜನೆ ಅನುಷ್ಟಾನಕ್ಕೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಗ್ರಾಮಕ್ಕೆ ಆಗಮಸಲಿದ್ದು ಅಗತ್ಯ ಸಿದ್ಧತೆ ಭರದಿಂದ ನಡೆದಿದ್ದು ಮಂಗಳವಾರ ಕಂಡುಬಂದಿತು.

ಕಳೆದ ಮೂರು ದಿನಗಳಿಂದಲೂ ಕೃಷ್ಣಾ ಭಾಗ್ಯ ಜಲ ನಿಮಗ, ಲೋಕೋಪಯೋಗಿ, ಕಂದಾಯ ಮತ್ತಿತರೆ ಇಲಾಖೆಗಳ ಹಿರಿಯ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ, ಕಾರ್ಮಿಕರು, ಹಗಲು ರಾತ್ರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮಾರಂಭ ತಮ್ಮ ಊರಿನಲ್ಲಿಯೇ ನಡೆಯುತ್ತಿರುವುದು ಕಲಾಲಬಂಡಿಯಲ್ಲಿ ಹಬ್ಬದ ವಾತಾವರಣವಿದ್ದು ಜನರ ಮನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹಾಗಾಗಿ ತಮ್ಮದೇ ಕಾರ್ಯಕ್ರಮ ಎಂಬಂತೆ ಅಧಿಕಾರಿಗಳೊಂದಿಗೆ ಸಿದ್ಧತೆಗೆ ಹೆಗಲುಗೊಟ್ಟಿದ್ದಾರೆ.

ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮತ್ತು ಪೊಲೀಸ್ ಇಲಾಖೆ. ಗುಪ್ತದಳ ಸಿಬ್ಬಂದಿ ಅನೇಕ ಬಾರಿ ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು. ಮೊದಲು ಮುಖ್ಯಮಂತ್ರಿ ಸಾಂಕೇತಿಕ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸಮಾರಂಭಕ್ಕೆ ಸಹಸ್ರ ಸಂಖ್ಯೆ ಜನರು ಆಗಮಿಸಲಿದ್ದು ಜನರನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕೆಂದೆ ಮುಖ್ಯಮಂತ್ರಿ ಮತ್ತು ಇತರೆ ಸಚಿವರು, ಗಣ್ಯರಿಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಸಭಿಕರಿಗಾಗಿ ಬೃಹತ್ ಪೆಂಡಾಲ್, ಆಸನದ ವ್ಯವಸ್ಥೆ ಮಾಡಲಾಗಿದೆ.

ಶಿಲಾನ್ಯಾಸ ನಡೆಯುವ ಸ್ಥಳ ಗ್ರಾಮದಿಂದ 1 ಕಿಮೀ ದೂರ ಇದ್ದು ಅಲ್ಲಿಯವರೆಗಿನ ಚಕ್ಕಡಿ ದಾರಿಯನ್ನು ತಾತ್ಕಾಲಿಕ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಸುತ್ತಲಿನ ರಸ್ತೆಗಳ ಗುಂಡಿಗಳಿಗೆ ಡಾಂಬರ್ ಹಾಕಿದ್ದು ಕಂಡುಬಂದಿತು.

ಏತ ನೀರಾವರಿಗೆ ಚಾಲನೆ ದೊರೆಯುತ್ತಿರುವುದರಿಂದ ಅತೀವ ಸಂತಸದಲ್ಲಿರುವ ಕೊಪ್ಪಳ ಏತ ನೀರಾವರಿ ಹೋರಾಟ ಸಮಿತಿಯವರು, ಶಾಸಕ, ಮಾಜಿ ಶಾಸಕ ಇತರೆ ಪ್ರಮುಖರು ಸಹಸ್ರ ಸಂಖ್ಯೆಯಲ್ಲಿ ಶಾಂತಿಯುತ ಪಾಲ್ಗೊಳ್ಳುವಿಕೆಗೆ ಹಳ್ಳಿ ಹಳ್ಳಿಗಳ ಜನರಿಗೆ ಮನವಿ ಮಾಡುತ್ತಿದ್ದುದು ಕಂಡುಬಂದಿತು.

ಮೆರವಣಿಗೆ: ಸಮಾರಂಭದ ಹಿನ್ನೆಲೆಯಲ್ಲಿ ತಾಲ್ಲೂಕಿನ ತಳುವಗೇರಾ, ವಣಗೇರಿ, ತೋಪಲಕಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ನಿಡಶೇಸಿ ಮೊದಲಾದ ಗ್ರಾಮಗಳ ನೂರಾರು ಜನರು ತಳುವಗೇರಾದಿಂದ ಶಿಲಾನ್ಯಾಸ ಸ್ಥಳದವರೆಗೆ, ಡೊಳ್ಳು ಭಜನೆ, ಜಾನಪದ ಕಲಾಪ್ರಕಾರಗಳೊಂದಿಗೆ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿ ಖಜಾಂಚಿ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.