ಕುಷ್ಟಗಿ: ಜನರು ಸಣ್ಣಪುಟ್ಟ ವಿಷಯಗಳಿಗೂ ನ್ಯಾಯಾಲಯದ ಮೆಟ್ಟಿಲು ಏರದೇ ಸಂಧಾನಗಳ ಮೂಲಕ ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಹಿರಿಯ ನ್ಯಾಯಾಧೀಶ ಎಂ.ಎಚ್.ಶಿರವಾಳಕರ ಗುರುವಾರ ಹೇಳಿದರು.
ತಾಲ್ಲೂಕಿನ ಟೆಂಗುಂಟಿ ಗ್ರಾಮದಲ್ಲಿ ಕಾನೂನು ಸಾಕ್ಷರತಾ ರಥ ಸಂಚಾರ, ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ನೆರವು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಮತ್ತು ಜನರಿಗೆ ಇರುವ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹೊರತು ಹಕ್ಕಿಗಾಗಿ ಹೋರಾಡಿ ಎಂದು ಪ್ರಚೋದಿಸುವುದಕ್ಕಲ್ಲ, ಮಾನವೀಯ ನೆಲೆಯಲ್ಲಿ ವಿಚಾರಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಕರೆ ನೀಡಿದರು.
ಅನೇಕ ಜನ ವಾಹನಗಳನ್ನು ಖರೀದಿಸಿದರೂ ಅದನ್ನು ತಯಾರಿಸಿದ ಉದ್ದೇಶಕ್ಕೆ ಬಳಸದೇ ಲಾರಿ, ಟ್ರ್ಯಾಕ್ಟರ್ ಇತರೆ ಗೂಡ್ಸ್‌ಗಾಡಿಗಳಲ್ಲೂ ಜನರನ್ನು ಕರೆದೊಯ್ಯುವುದು ಮತ್ತು ಟಾಪ್ ಮೇಲೆ ಪ್ರಯಾಣಿಸುವುದು ತಪ್ಪು ಅಷ್ಟೇ ಅಲ್ಲ ಅತ್ಯಂತ ಅಪಾಯಕಾರಿಯೂ ಹೌದು ಎಂದರು.
ಪ್ರತಿಯೊಂದು ವಾಹನಕ್ಕೂ ವಿಮೆ ಇಳಿಸಬೇಕು, ಒಂದು ವೇಳೆ ಚಾಲಕನ ತಪ್ಪಿನಿಂದ ಅಪಘಾತವಾದರೆ ವಿಮಾಪರಿಹಾರ ದೊರೆಯುವುದಿಲ್ಲ. ಇಂಥ ವಿಷಯಗಳಲ್ಲಿ ಜನ ಜಾಗೃತಿ ವಹಿಸುವಂತೆ ಸಲಹೆ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷೆ ರೇಣವ್ವ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ವಿ.ವೆಂಕಟೇಶಪ್ಪ, ಗ್ರಾ.ಪಂ ಅಧ್ಯಕ್ಷ ಎಸಿದ್ದಪ್ಪ ಟಕ್ಕಳಕಿ, ತಿಪ್ಪಣ್ಣ, ಶರಣೇಗೌಡ, ಶಾವಮ್ಮ, ಸರ್ಕಾರಿ ವಕೀಲ ಎನ್.ಎಸ್.ನಾಯ್ಕ, ವಕೀಲರಾದ ಫಕೀರಪ್ಪ ಚಳಗೇರಿ, ನಾಗಪ್ಪ ಸೂಡಿ, ಎಂ.ಎಂ.ಹಿರೇಮಠ, ಕೃಷ್ಣ ಆಶ್ರೀತ, ರುದ್ರಗೌಡ ಪಾಟೀಲ, ವಿ.ಎಚ್.ಈಳಗೇರ್, ಎಚ್.ಆರ್.ನಾಯಕ್, ಅಕ್ಕಮಹಾದೇವಿ ಪಾಟೀಲ, ಎ.ಎಚ್.ಪಲ್ಲೇದ, ಪಿ.ಡಿ.ಒ ಎಂ.ವೀರೇಶ್ ಇತರರು ವೇದಿಕೆಯಲ್ಲಿದ್ದರು.
ಎಸ್.ಎಲ್.ಚಟ್ನಿಹಾಳ ನಿರೂಪಿಸಿದರು. ಆರ್.ಎಸ್.ಗುರುಮಠ ಸ್ವಾಗತಿಸಿದರು. ಡಿ.ಗೋಪಾಲರಾವವಂದಿಸಿದರು. ಗ್ರಾಮದಗಣ್ಯರು, ರೈತರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.