ADVERTISEMENT

ಸಮ್ಮೇಳನ; ಮಹಿಳಾ ಸಮಿತಿಗೆ ರೂ.1.5 ಲಕ್ಷ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:00 IST
Last Updated 12 ಸೆಪ್ಟೆಂಬರ್ 2011, 9:00 IST

ಗಂಗಾವತಿ: ನವೆಂಬರ್‌ನಲ್ಲಿ ನಡೆಯುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಗರವನ್ನು ಒಪ್ಪವಾಗಿ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಾಣ ಮಾಡಲು ಕನಿಷ್ಠ ರೂ, 1.5 ಲಕ್ಷ ಅಗತ್ಯವಿದೆ ಎಂದು ಸಮ್ಮೇಳನದ ಮಹಿಳಾ ಸಮಿತಿ ಪರಿಷತ್ತಿಗೆ ಪ್ರಸ್ತಾವನೆ ಸಲ್ಲಿಸಿದೆ.

ಈ ಬಗ್ಗೆ ಶನಿವಾರ ಸಮ್ಮೇಳನದ ಸ್ವಾಗತ ಕಚೇರಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಕವಿತಾ ಗುರುಮೂರ್ತಿ ನೇತೃತ್ವದಲ್ಲಿ ನಡೆದ ಮಹಿಳಾ ಸಮಿತಿಯ ಸಭೆಯಲ್ಲಿ ವಿವಿಧ ವಿಷಯದ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ ರೂ, 1.5 ಲಕ್ಷ ಮೊತ್ತದ ಪ್ರಸ್ತಾವನೆ ವ್ಯಕ್ತವಾಯಿತು.

78ನೇ ಸಮ್ಮೇಳನದ ಅಂಗವಾಗಿ ನಡೆಯುವ ಮೆರವಣಿಗೆ ಸಂದರ್ಭದಲ್ಲಿ 78 ಕುಂಭ ಮತ್ತು ಐದು ಕಲಶ ಹೊರಬಲ್ಲ ಮಹಿಳೆಯರನ್ನು ಆಯ್ಕೆ ಮಾಡುವ ಮಾನದಂಡ, ಅನುಸರಿಬೇಕಾದ ವಿಧಾನ, ಪೂರಕ ಸೌಲಭ್ಯಗಳ ಕುರಿತು ಚರ್ಚೆ ನಡೆಯಿತು.

ಶೈಲಜಾ ಹಿರೇಮಠ ಮಾತನಾಡಿ, ಮೆರವಣಿಗೆಯ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಕುಂಭ ಹೊರುವ ಮಹಿಳೆಯರಿಗೆ ಏಕ ರೂಪದ ಸೀರೆ ಖರೀದಿಸಬೇಕಿದೆ. ಸಮ್ಮೇಳನದ ಸಂಘಟಕರು ಶೀಘ್ರ ಹಣ ನೀಡಿದರೆ ಗುಣಮಟ್ಟದ ಸೀರೆಗಳನ್ನು ನೇಯಿಸಲಾಗುವುದು ಎಂದರು. 

ಕುಂಭಕ್ಕೆ ಅಗತ್ಯವಾಗುವ 83 ಸ್ಟೀಲ್ ಬಿಂದಿಗೆ, ತೆಂಗಿನಕಾಯಿ ಮತ್ತು ಕಳಶ ಮತ್ತು ಕುಂಭಕ್ಕೆ ಸುತ್ತುವ ರವಿಕೆಗಳನ್ನು ಸ್ವಂತ ಹಣದಿಂದ ಕೊಡಿಸುವುದಾಗಿ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ. ಮಾಜಿ ಸದಸ್ಯೆ ಶೈಲಜಾ ರಮೇಶ ಈ ಸಂದರ್ಭದಲ್ಲಿ ಒಪ್ಪಿಕೊಂಡರು.

ರಾಣಾ ಪ್ರತಾಪ ಸಿಂಗ್ ವೃತ್ತದಿಂದ ಸಮರ್ಥ ಕಾರ್ ಕೇರ್‌ವರೆಗೆ ಮತ್ತು ಬಸ್ ನಿಲ್ದಾಣದಿಂದ ಸಮ್ಮೇಳನದ ಮುಖ್ಯ ವೇದಿಕೆಯ ವರೆಗೂ ರಸ್ತೆಯ ಎರಡು ಭಾಗದಲ್ಲಿ ರಂಗೋಲಿ ಹಾಕಿ ಸಿಂಗರಿಸಬೇಕೆಂಬ ವಿಷಯದ ಬಗ್ಗೆ ಚರ್ಚ ನಡೆಯಿತು.

ರಂಗೋಲಿ ಹಾಕುವುದು ಸುಲಭವಲ್ಲ. ಕನಿಷ್ಠ 200 ಮಹಿಳೆಯರು ಬೇಕಾಗುತ್ತದೆ ಎಂದು ಅನ್ನಪೂರ್ಣ ಸಿಂಗ್ ಹೇಳಿದರು. 500 ಮಹಿಳೆಯರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ಸಮ್ಮೇಳನಕ್ಕೆ ಆಗಮಿಸುವ ತಲಾ ಇಬ್ಬರು ಮುಖ್ಯ ಅತಿಥಿಗಳನ್ನು ಮನೆಗೆ ಕರೆದೊಯ್ದು ಆತಿಥ್ಯ ನೀಡುವಂತೆ ಸಂಘಟಕರು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಬಿ. ಗೊಂಡಬಾಳ, ಸಮ್ಮೇಳನದ ಜಾಹೀರಾತು ಸಮಿತಿ ಅಧ್ಯಕ್ಷ ಬಸವರಾಜ ಕೋಟೆ, ಮಹಿಳಾ ಪ್ರಮುಖರಾದ ಸುಮಿತಿ ಭಂಡಾರ‌್ಕರ್, ಗೀತಾವಿಕ್ರಂ, ಎ. ಸುನಿತಾ, ವೀಣಾ ಮುದ್ಗಲ್, ಭಾಗ್ಯ ಮೊದಲಾದವರಿದ್ದರು.   
 
ವಸತಿ ಸಮಿತಿ ಸಭೆ: ಇದೇ ಕಚೇರಿಯಲ್ಲಿ ಸಂಜೆ 4ಗಂಟೆಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಮತ್ತು ವಸತಿ ಸಮಿತಿ ಅಧ್ಯಕ್ಷ ಸಿದ್ದಾಪುರ ಮಂಜುನಾಥ ಅವರ ನೇತೃತ್ವದಲ್ಲಿ ವಸತಿ ಸಮಿತಿಯ ಸಭೆ ನಡೆಯಿತು. ವಸತಿಗೆ ಸಂಬಂಧಿತ ವಿವಿಧ ವಿಷಯದ ಬಗ್ಗೆ                            ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.