ಗಂಗಾವತಿ: ವಿದ್ಯುತ್ ಇಲಾಖೆಯ ಸಹಾಯಕ ಎಂಜಿನಿಯರ್ ಜಗನ್ನಾಥ ರಾಠೋಡ ಅವರ ಮೇಲೆ ಹಲ್ಲೆ ಮಾಡಿರುವ ಸಿಬ್ಬಂದಿಯನ್ನು ವಜಾಗೊ-ಳಿಸಬೇಕೆಂದು ಒತ್ತಾಯಿಸಿ ಲಂಬಾಣಿ ಸಮುದಾಯದ ಮಹಿಳೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಜಗನ್ನಾಥ ರಾಠೋಡರ ತಾಯಿ ರಾಮಾಬಾಯಿ ನೇತೃತ್ವದಲ್ಲಿ ನೀಲಕಂಠೇಶ್ವರ ವೃತ್ತದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಘಟನೆಗೆ ಕಾರಣರಾದ ಶಿಕ್ಷಕಿ ನಳಿನಾಕ್ಷಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ವಿದ್ಯುತ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಲಾಖೆಗೆ ಮುತ್ತಿಗೆ ಹಾಕಿದರು. ಬಳಿಕ ಕಚೇರಿಯ ಬಾಗಿಲಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆಗೆ ಕಾರಣವಾದ ಎಫ್‌ಡಿಎ ನಾರಾಯಣ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿದರು.
ರಾಮಾಬಾಯಿ ಮಾತನಾಡಿ, ‘ವಿನಾಕಾರಣ ನನ್ನ ಮಗ ಜಗನ್ನಾಥ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಮೇಲೆ ಸಹದ್ಯೋಗಿ ಎಂದು ಕನಿಷ್ಠ ಸೌಜನ್ಯವಿಲ್ಲದೆ ಇಲಾಖೆಯ ನಾರಾಯಣಿ ತಮ್ಮ ಪತ್ನಿ ನಳಿನಾಕ್ಷಿ ಮೂಲಕ ಹಲ್ಲೆ ಮಾಡಿಸಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡುವುದು, ನಿಂದಿಸುವುದು ಮಾನವೀಯತೆ ಅಲ್ಲ ಎಂಬ ಕಾರಣಕ್ಕೆ ನನ್ನ ಪುತ್ರ ಕೈ ಮಾಡಿಲ್ಲ. ಇದನ್ನೇ ಬಂವಾಳವಾಗಿಸಿಕೊಂಡ ಮಹಿಳೆ ವಿನಾಕಾರಣ ಇಲಾಖೆ ಮಾನ ಬೀದಿಯಲ್ಲಿ ಹರಾಜು ಹಾಕಿದ್ದಾರೆ. ಕೂಡಲೇ ಶಿಕ್ಷಕಿ ಹಾಗೂ ನಾರಾಯಣಿಯನ್ನು ಸೇವೆಯಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.
ಮನವಿಯನ್ನು ಬಿಇಒ ಮತ್ತು ಜೆಸ್ಕಾಂ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗೆ ಸಲ್ಲಿಸಲಾಯಿತು. ಧರಣಿಯಲ್ಲಿ ವಕೀಲ ಪಾಂಡುರಂಗ, ಸೀತಮ್ಮ, ಚಂದಮ್ಮ, ತುಳಜಮ್ಮ, ರೇಣುಕಾ, ರಾಮಮ್ಮ, ಬಾಲಮ್ಮ, ಶಾಂತಮ್ಮ, ಮಂಜುಳಾ, ಭಾಗವ್ವ, ಗೀತಾ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.