ADVERTISEMENT

ಸುಸಜ್ಜಿತ ಕ್ರೀಡಾಂಗಣ ಗಗನ ಕುಸುಮ

ಭೀಮಸೇನ ಚಳಗೇರಿ
Published 6 ಫೆಬ್ರುವರಿ 2012, 9:45 IST
Last Updated 6 ಫೆಬ್ರುವರಿ 2012, 9:45 IST
ಸುಸಜ್ಜಿತ ಕ್ರೀಡಾಂಗಣ ಗಗನ ಕುಸುಮ
ಸುಸಜ್ಜಿತ ಕ್ರೀಡಾಂಗಣ ಗಗನ ಕುಸುಮ   

ಕೊಪ್ಪಳ: ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣ ವರ್ಷಕ್ಕೆ ನಾಲ್ಕು ಬಾರಿ ನೆನಪಾಗುತ್ತದೆ. ಸ್ವಾತಂತ್ರ್ಯ ದಿನ, ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ, ಕನ್ನಡ ರಾಜ್ಯೋತ್ಸವ ಹಾಗೂ ಗಣ ರಾಜ್ಯೋತ್ಸವ ಸಂದರ್ಭಗಳಲ್ಲಿ ಈ ಜಿಲ್ಲಾ ಕ್ರೀಡಾಂಗಣದ ನೆಲಕ್ಕೆ ನೂರಾರು ಪುಟ್ಟಿಗಳಷ್ಟು ಮಣ್ಣನ್ನು ಹಾಕಲಾಗುತ್ತದೆ. ರೋಲರ್ ಓಡಿಸಿ ಸಮತಟ್ಟನ್ನಾಗಿ ಮಾಡಲಾಗುತ್ತದೆ.

ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಕಾರುಗಳು ಓಡಾಡಿ ಧೂಳೆಬ್ಬಿಸಿ, ಗಾಲಿಗಳ ಮೇಲಿನ ಚಿತ್ತಾರಗಳನ್ನು ಮಣ್ಣಿನಲ್ಲಿ ಅಚ್ಚೊತ್ತಿ ಜಾಗ ಖಾಲಿ ಮಾಡುತ್ತವೆ. ಅಲ್ಲಿಗೆ ಮುಗಿಯಿತು! ಈ ವಿದ್ಯಮಾನ ಪುನರಾವರ್ತನೆಯಾಗುತ್ತಲಿದೆ. ಆದರೆ, ಜಿಲ್ಲಾ ಕೇಂದ್ರವೆನಿಸಿದ ನಗರದಲ್ಲಿ ಸುಸಜ್ಜಿತ ಕ್ರೀಡಾಂಗಣ ಇನ್ನು ತಲೆಯೆತ್ತುತ್ತಲೇ ಇಲ್ಲ. ನಗರದ ಜನತೆಯ ಮನದಲ್ಲಿ ಸಹ ಅಚ್ಚೊತ್ತಿದಂತೆ ಈ ಕ್ರೀಡಾಂಗಣ ರೂಪುಗೊಳ್ಳುತ್ತಿಲ್ಲ.

ಜಿಲ್ಲಾ ಕೇಂದ್ರವಾಗಿದ್ದು 1997ರಲ್ಲಿ. ಆದರೆ, ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು 2008ರಲ್ಲಿ. ಈ ಕ್ರೀಡಾಂಗಣ ನಿರ್ಮಾಣಕ್ಕೆ 16 ಕೋಟಿ ರೂಪಾಯಿ ಮಂಜೂರಾಯಿತಲ್ಲದೇ, ಹಂತ-ಹಂತವಾಗಿ ಹಣವೂ ಬಿಡುಗಡೆಯಾಗಿದೆ. ಆದರೆ, ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಆಮೆ ವೇಗದಲ್ಲಿ ನಡೆಯುತ್ತಿದೆ.

ಉತ್ತಮ ಟ್ರ್ಯಾಕ್ ಇಲ್ಲ. ಪ್ರೇಕ್ಷಕರ ಕುಳಿತು ಆಟೋಟಗಳನ್ನು ನೋಡಿ ಸಂಭ್ರಮಿಸಲು ಆಸನ ವ್ಯವಸ್ಥೆ ಇಲ್ಲ. ಕ್ರೀಡಾಂಗಣದ ನೆಲವೇ ಇನ್ನೂ ಸಮತಟ್ಟಾಗಿಲ್ಲ ಎಂದ ಮೇಲೆ ಇತರ ಸೌಲಭ್ಯಗಳು ಹೇಗೆ ಸಿಕ್ಕಾವು ಎಂಬ ಪ್ರಶ್ನೆ ಜನತೆಯದು.

ಈ ಕ್ರೀಡಾಂಗಣ ಇನ್ನೂ ಸುಸಜ್ಜಿತವಾಗಿಲ್ಲ ಎಂಬುದಕ್ಕೆ ಸದ್ಯ ಅಲ್ಲಿ ಆರಂಭಗೊಂಡಿರುವ ಸೇನಾ ಭರ್ತಿ ರ‌್ಯಾಲಿಯೇ ಸಾಕ್ಷಿ. ಭಾರತೀಯ ಸೇನೆಯ ವಿವಿಧ ಹುದ್ದೆಗಳ ಭರ್ತಿಗಾಗಿ ಫೆ. 10ರ ವರೆಗೆ ರ‌್ಯಾಲಿ ಅಂಗವಾಗಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಯುತ್ತಿದೆ. ಓಟದ ಪರೀಕ್ಷೆಯೂ ನಡೆಯುತ್ತಿದೆ.

ಹೀಗಾಗಿ ಸುರಕ್ಷತೆ ಹಾಗೂ ಈ ಎಲ್ಲ ಕಾರಣಗಳಿಗಾಗಿ ಇಡೀ ಕ್ರೀಡಾಂಗಣದ ಸುತ್ತ ಬಿದಿರಿನ ತಟ್ಟಿಗಳ ಗೋಡೆಯನ್ನು ನಿರ್ಮಿಸಲಾಗಿದೆ. ಒಂದು ವೇಳೆ ಗ್ಯಾಲರಿ ನಿರ್ಮಾಣಗೊಂಡಿದ್ದರೆ ಇಂತಹ ಸ್ಥಿತಿ ಉದ್ಧವವಾಗುತ್ತಿರಲಿಲ್ಲ.

ಮಕ್ಕಳು, ಯುವಕರಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಮೂಡಲು, ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂಬುವವರಿಗೆ ಮೆಟ್ಟಿಲಾಗಲು, ಅವರ ತಾಲೀಮಿಗೆ ರಂಗ ಸಜ್ಜಿಕೆಯಾಗಲು ಸುಸಜ್ಜಿತ ಕ್ರೀಡಾಂಗಣ ಅಗತ್ಯ.
ಇನ್ನಾದರೂ, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ನಿಟ್ಟಿನಲ್ಲಿ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.